ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಹೊತ್ತಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ತಮ್ಮ ಸ್ಥಾನಕ್ಕೆ ಇಂದು(ಸೋಮವಾರ) ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದುಕೊಂಡಿದ್ದರು. ಆದರೆ, ಅದು ಕೈಗೂಡುವ ಲಕ್ಷಣಗಳು ಕಾಣಿಸುತ್ತಿಲ್ಲ ಎನಿಸುತ್ತಿದೆ. ಹೀಗಾಗಿ ಹುಬ್ಬಳ್ಳಿಗೆ ಹೋಗಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಹಾವೇರಿಯ ಶಿಗ್ಗಾಂವ ಹಾಗೂ ಬಳ್ಳಾರಿಯ ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಈಗ ಚನ್ನಪಟ್ಟಣ ಉಳಿದಿದ್ದು, ಇಲ್ಲಿ ಜೆಡಿಎಸ್ ನಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆಗೆ ಪ್ಲಾನ್ ನಡೆಯುತ್ತಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್ ಗೆ ಟಿಕೆಟ್ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಆದರೆ, ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ನಾನೇ ಎನ್ನುತ್ತಿದ್ದ ಸಿ.ಪಿ ಯೋಗೇಶ್ವರಗೆ ಹಿನ್ನಡಯಾಗುವ ಸಾಧ್ಯತೆಯಿದೆ. ಇನ್ನೊಂದು ಕಡೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಲು ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಚಿಹ್ನೆ ಅಡಿ ಸ್ಪರ್ಧಿಸುತ್ತಾರ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರ, ಬಿಜೆಪಿ ಹೈಕಮಾಂಡ್ ಮನವೊಲಿಸುತ್ತಾ ಅನ್ನೋದು ಶೀಘ್ರದಲ್ಲಿ ತಿಳಿಯಲಿದೆ.