ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಶಾಸ್ವಕೋಶದ ಸೋಂಕಿಗೆ ಒಳಗಾಗಿ ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ(sitaram yechury) ಗುರುವಾರ ನಿಧನರಾಗಿದ್ದಾರೆ. 72 ವರ್ಷದ ಯೆಚೂರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ 19ರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚೆನ್ನೈನಲ್ಲಿ ಆಗಸ್ಟ್ 12, 1952ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ಯೆಚೂರಿ ಸೀತಾರಾಮರಾವ್. ಸಿಪಿಎಂನ(CPIM) ಮೊದಲ ಪ್ರಧಾನ ಕಾರ್ಯದರ್ಶಿ ಪಿ.ಸುಂದರಯ್ಯ(ಸುಂದರರಾಮ ರೆಡ್ಡಿ) ಅವರಿಂದ ಪ್ರಭಾವಿತರಾದರು. ಕಾರ್ಲ್ಸ್ ಮಾರ್ಕ್ಸ್ ಸಿದ್ಧಾಂತಗಳಿಗೆ ಮಾರು ಹೋದರು. ಹೀಗಾಗಿ ತಮ್ಮ ಹೆಸರಿನೊಂದಿಗೆ ಇದ್ದ ಜಾತಿ ಸೂಚಕ ನಾಮಪದ ತೆಗೆದುಹಾಕಿದರು. ಮುಂದೆ ಸೀತಾರಾಮ್ ಯೆಚೂರಿ ಆದರು.
2005 ರಿಂದ 2017ರ ತನಕ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿದ್ದರು. 2015ರಿಂದ ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 32 ವರ್ಷಗಳ ಕಾಲ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದರು. ಬಹುಜನರ ಉದ್ದಾರಕ್ಕಾಗಿ ಹೋರಾಟ ನಡೆಸಿದರು. ಕಾರ್ಮಿಕ ಹೋರಾಟಗಳಲ್ಲಿ ಗುರುತಿಸಿಕೊಂಡರು. ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆಯಾದ ಛಾಪು ಮೂಡಿಸಿದರು.