ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ(Murder Case) ಪ್ರಕರಣದಲ್ಲಿ ಎ2 ಆರೋಪಿಯಾಗಿ ಕಳೆದ ಮೂರು ತಿಂಗಳಿಗಿಂತ ಹೆಚ್ಚು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನರನ್ನು ಗುರುವಾರ ಐಟಿ(IT Officers) ಅಧಿಕಾರಿಗಳು ವಿಚಾರಣೆ ನಡೆಸಿದರು. ಕೊಲೆ ಪ್ರಕರಣದಲ್ಲಿಯೇ ಸುಮಾರು 40 ಲಕ್ಷ ರೂಪಾಯಿಗಳ ವ್ಯವಹಾರ ನಡೆದಿದೆ ಎನ್ನುವ ವಿಚಾರ ಚಾರ್ಜ್ ಶೀಟ್ ನಲ್ಲಿದೆ. ನಗದು ರೂಪದಲ್ಲಿ ವ್ಯವಹಾರ ನಡೆದಿರುವುದರಿಂದ ಐಟಿ ಅಧಿಕಾರಿಗಳು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ಗುರುವಾರ ಬಳ್ಳಾರಿ ಜೈಲಿಗೆ(Jail) ಭೇಟಿ ನೀಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಜೈಲು ಅಧೀಕ್ಷಕರ ಕಚೇರಿಯಲ್ಲಿ ಜೈಲು ಅಧೀಕ್ಷಕಿ ಲತಾ ಅವರ ಮುಂದೆ ಬರೋಬ್ಬರಿ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟ ದರ್ಶನ್ ಅವರ ಲೆಕ್ಕ ಪರಿಶೋಧಕರು ಭಾಗವಹಿಸಿದ್ದರು. ಬಿಬಿಎಂಪಿ ಮಾಜಿ ಉಪ ಮೇಯರ್ ಮೋಹನ್ ರಾಜ್, ನಟ ದರ್ಶನಗೆ 40 ಲಕ್ಷ ರೂಪಾಯಿ ನೀಡಿರುವ ಕುರಿತು ಹೇಳಿಕೆ ನೀಡಿದ್ದರು. ಅವರಿಂದ ನಾನು ಹಣ ಪಡೆದಿದ್ದೆ. ಅದನ್ನು ವಾಪಸ್ ಮಾಡಿದ್ದೇನೆ ಎಂದಿದ್ದರು. ಆದರೆ, ಇಷ್ಟು ದೊಡ್ಡ ಮೊತ್ತ ನಗದು ರೂಪದಲ್ಲಿ ನಡೆದಿದ್ದರ ಕುರಿತು ತನಿಖೆ ನಡೆಯುತ್ತಿದೆ. ವಿಚಾರಣೆ ಅಂತ್ಯವಾಗಿದೆ. ಇನ್ನು ಶುಕ್ರವಾರ ನಟ ದರ್ಶನ್ ಜಾಮೀನು(Bail) ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ಬಾರಿ ಪ್ರಾಸಿಕ್ಯೂಷನ್ ಪರ ವಕೀಲರಿಗೆ ತಕರಾರು ಅರ್ಜಿಗೆ ಸೂಚಿಸಿ ಮುಂದೂಡಲಾಗಿತ್ತು. 2ನೇ ಬಾರಿಗೆ ಪ್ರಾಸಿಕ್ಯೂಷನ್ ವಕೀಲರು ಜಾಮೀನು ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿದ್ದರು. ಹೀಗಾಗಿ ಸೆಪ್ಟೆಂಬರ್ 27ರಂದು ವಿಚಾರಣೆ ನಡೆಯಲಿದೆ.