ಪ್ರಜಾಸ್ತ್ರ ಸುದ್ದಿ
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್ ಚಿತ್ರದ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಆಗಸ್ಟ್ 24 ಭಾನುವಾರ ಮುಂಜಾನೆ 10.05ಕ್ಕೆ ಹಾಡು ಬಿಡುಗಡೆಗೆ ಮಾಡಲಾಗುವುದು ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಈ ಮೂಲಕ ನಟ ದರ್ಶನ್ ಜೈಲಿಗೆ ಹೋದರೂ, ಚಿತ್ರದ ಕೆಲಸ ನಿಲ್ಲಬಾರದು ಎಂದು ಅವರು ಹೇಳಿದ್ದರಿಂದ ಹಾಡು ಬಿಡುಗಡೆಗೆ ಚಿತ್ರ ತಂಡ ಸಜ್ಜಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ಹಾಡು ಬಿಡುಗಡೆಯಾಗಬೇಕಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನುನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಹಿನ್ನಲೆಯಲ್ಲಿ ವಾಪಸ್ ಜೈಲು ಪಾಲಾಗಿದ್ದಾರೆ. ಅಲ್ಲಿಂದಲೇ ಚಿತ್ರತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಸಂದೇಶ ಕಳಿಸಿದ್ದರು. ಅದನ್ನು ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡಿದ್ದರು.
ಇದೀಗ ದರ್ಶನ್ ಅವರ ಎಕ್ಸ್ ಖಾತೆಯಿಂದಲೂ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಹಾಡು ಬರೆದಿದ್ದು ಯಾರು, ಗಾಯಕರು ಯಾರು ಅನ್ನೋದು ತಿಳಿದು ಬಂದಿಲ್ಲ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ತಾರಕ್ ಸಿನಿಮಾ ಬಳಿಕ ನಟ ದರ್ಶನ್ ಹಾಗೂ ನಿರ್ದೇಶಕ ಪ್ರಕಾಶ್ ದಿ ಡೆವಿಲ್ ಸಿನಿಮಾದಲ್ಲಿ ಒಂದಾಗಿದ್ದಾರೆ.