ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಅದರಂತೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ ಜಿಲ್ಲೆಯ ಕೃಷ್ಣಾ, ಭೀಮಾ ಮತ್ತು ಡೋಣಿ ನದಿ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಯ ನದಿ ಪಾತ್ರಗಳಲ್ಲಿನ ಗ್ರಾಮದ ಜನರು ಅಗತ್ಯ ಪ್ರವಾಹ ಪರಿಸ್ಥಿತಿ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿದ್ದಾರೆ.
ಮಹಿಳೆಯರು, ಮಕ್ಕಳು ನದಿ ಪಾತ್ರಕ್ಕೆ ಬಟ್ಟೆ-ಪಾತ್ರೆ ತೊಳೆಯುವುದು, ಅನಾವಶ್ಯಕವಾಗಿ ನದಿ ಪಾತ್ರಕ್ಕೆ ತೆರಳುವುದು, ನದಿಯಲ್ಲಿ ಈಜುವುದು, ಮೀನು ಹಿಡಿಯುವುದನ್ನು ಮಾಡಬಾರದು. ಪ್ರವಾಹ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ಮಾಹಿತಿಗಳ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು. ರೈತರು ನದಿಗಳಲ್ಲಿ ಅಳವಡಿಸಿರುವ ಪಂಪ ಸೆಟ್‌ಗಳನ್ನು ತೆರವುಗೊಳಿಸಬೇಕು. ರೈತರು ರಾತ್ರಿ ಸಮಯದಲ್ಲಿ ತಮ್ಮ ಜಮೀನಿನ ಬೆಳೆಗಳಿಗೆ ನೀರು ಹರಿಸಲು ಹೋಗುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಜಿಲ್ಲಾ ಸಹಾಯವಾಣಿ ಸಂಖ್ಯೆ 1077 ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.