Ad imageAd image

ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ಹರಾಜಿಗೆ ನಿರ್ಧಾರ: ಡಿಸಿ ಭೂಬಾಲನ್

ಕಬ್ಬು ನುರಿಸಿದ ಹಣವನ್ನು ರೈತರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ

Nagesh Talawar
ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ಹರಾಜಿಗೆ ನಿರ್ಧಾರ: ಡಿಸಿ ಭೂಬಾಲನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕಬ್ಬು ನುರಿಸಿದ ಹಣವನ್ನು ರೈತರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಬಬಲೇಶ್ವರ(Babaleshwara) ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ತಿಳಿಸಿದ್ದಾರೆ. ಬಬಲೇಶ್ವರ ತಾಲ್ಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶುಗರ್ಸ್(Sugar Factory) ಕಾರ್ಖಾನೆಯವರು 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾಗಿರುವ ಬಾಕಿ ಹಣ 68.44 ಕೋಟಿ ರೂಪಾಯಿಗಳನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಇರುವ ಕಾರಣದಿಂದ ಸಕ್ಕರೆ (ನಿಯಂತ್ರಣ) ಆದೇಶ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿಯಲ್ಲಿ ಸದರಿ ಸಕ್ಕರೆ ಕಾರ್ಖಾನೆಯವರಿಂದ ಭೂಬಾಕಿ ರೂಪದಲ್ಲಿ ಬಡ್ಡಿ ಸಮೇತ ವಸೂಲಾತಿಗಾಗಿ ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಆದೇಶ ಹೊರಡಿಸಿದ್ದಾರೆ.

ರೈತರಿಗೆ(Farmers) ನೀಡಬೇಕಾಗಿರುವ ಬಾಕಿ ಹಣ 70.80 ಕೋಟಿ ರೂಪಾಯಿ(ಬಡ್ಡಿಸೇರಿ)ಗಳನ್ನು ಪಾವತಿಸಲು ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದ್ದರೂ ಸಹಿತ ಸದರಿ ಕಾರ್ಖಾನೆಯವರು ಸ್ಪಂದಿಸದೇ ಇರುವುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಮೇರೆಗೆ ಬಬಲೇಶ್ವರ ತಾಲ್ಲೂಕಿನ ಕಾರಜೋಳ ಗ್ರಾಮದ ಶ್ರೀ ಬಸವೇಶ್ವರ ಶುಗರ್ಸ ಸಕ್ಕರೆ ಕಾರ್ಖಾನೆಯ ಆಸ್ತಿಗಳ ಭೂ ದಾಖಲೆಗಳಲ್ಲಿ 70.80 ಕೋಟಿ ಹಣವನ್ನು ಬೋಜಾ ದಾಖಲು ಮಾಡಿ ಗೇಣಿ ಮತ್ತು ಪಹಣಿ ಪತ್ರಿಕೆಗಳನ್ನು ಸಲ್ಲಿಸಲು ತಹಶೀಲ್ದಾರ್ ಬಬಲೇಶ್ವರ ಇವರಿಗೆ ಈಗಾಗಲೇ ಆದೇಶಿಸಲಾಗಿದೆ. ಅದರಂತೆ ತಹಶೀಲ್ದಾರರು ಸದರಿ ಸಕ್ಕರೆ ಕಾರ್ಖಾನೆಯ ಭೂದಾಖಲೆಗಳಲ್ಲಿ ಬೋಜಾ ದಾಖಲಿಸಿದ್ದಾರೆ. ಮುಂದುವರೆದು, ಈವರೆಗೂ ಸದರಿ ಸಕ್ಕರೆ ಕಾರ್ಖಾನೆಯವರು ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವುದರಿಂದ ರೈತರಿಗೆ ಹಣ ನೀಡುವ ನಿಟ್ಟಿನಲ್ಲಿ ಸದರಿ ಸಕ್ಕರೆ ಕಾರ್ಖಾನೆಯನ್ನು ಹರಾಜು ಮಾಡಲು ನಿರ್ಧರಿಸಿದೆ.

ಆದ್ದರಿಂದ, ಸಕ್ಕರೆ ಕಾರ್ಖಾನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯವರಿಗೆ ಪ್ರಥಮಾಧ್ಯತೆಯ ಮೇರೆಗೆ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯ ಆಹಾರ ಶಾಖೆಯನ್ನು ಆಗಸ್ಟ್ 8, 2024ರೊಳಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಿ ಖರೀದಿಸುವ ಮೌಲ್ಯವನ್ನು ಲಿಖಿತವಾಗಿ ಸಲ್ಲಿಸಲು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article