ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದ ಬಬಲೇಶ್ವರ ನಾಕಾದ ಹತ್ತಿರವಿರುವ ಮುಜಾವರ ಗಲ್ಲಿ, ಬಾಗವಾನ ಕಾಲೋನಿ ಸೇರಿದಂತೆ ವಿವಿಧೆಡೆ ರಾಜಕಾಲುವೆ ಒತ್ತುವರಿ(Encroachment) ತೆರವಿಗೆ ಪ್ರಾಚ್ಯವಸ್ತು ಇಲಾಖೆ, ಭೂಮಾಪನ ಹಾಗೂ ಮಹಾನಗರ ಪಾಲಿಕೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು. ಮಂಗಳವಾರ ನಗರದ ರಹೀಮನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ರಾಜಕಾಲುವೆ ಒತ್ತುವರಿಯಿಂದ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆ, ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದರು.
ಇಬ್ರಾಹಿಂರೋಜಾದಿಂದ ಬಬಲೇಶ್ವರ ನಾಕದವರೆಗೆ ರಾಜಕಾಲುವೆಯ ಅಕ್ಕಪಕ್ಕ ಅತಿಕ್ರಮಣ ಮಾಡಿದವರನ್ನು ತೆರವುಗೊಳಿಸಬೇಕು. ಅತಿಕ್ರಮಣ ಮಾಡಿದವರಿಗೆ ಬೇರೆ ಕಡೆ ಸ್ಥಳಾಂತರ ಮಾಡಿಸುವಲ್ಲಿ ಅಧಿಕಾರಿಗಳು ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಪ್ರಾಚ್ಯವಸ್ತು ಇಲಾಖೆ, ಭೂಮಾಪನ ಇಲಾಖೆ, ಡಿಡಿಎಲ್‌ಆರ್, ಎಡಿಎಲ್‌ಆರ್ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.