Ad imageAd image

ವಿಜಯಪುರ: ನಿಯಮ ಪಾಲಿಸದ ಆಸ್ಪತ್ರೆ, ಕ್ಲಿನಿಕ್ ಗಳ ವಿರುದ್ಧ ಕ್ರಮಕ್ಕೆ ಡಿಸಿ ಆದೇಶ

Nagesh Talawar
ವಿಜಯಪುರ: ನಿಯಮ ಪಾಲಿಸದ ಆಸ್ಪತ್ರೆ, ಕ್ಲಿನಿಕ್ ಗಳ ವಿರುದ್ಧ ಕ್ರಮಕ್ಕೆ ಡಿಸಿ ಆದೇಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ (ಪಿ.ಸಿ.ಪಿ.ಎನ್.ಡಿ.ಟಿ) ಕಾಯಿದೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಸಿಪಿಎನ್.ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಿಸಿಪಿಎನ್‌ಡಿಟಿ ಕಾನೂನು ಜಾರಿಗೊಳಿಸಬೇಕು. ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಡೆಸಬೇಕು. ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಎಂದರು.

ಜಿಲ್ಲೆಯಲ್ಲಿ ಸುಮಾರು 817 ಕೆಪಿಎಮ್ಇ ಅಡಿ ನೋಂದಣಿಯಾದ ಆರೋಗ್ಯ ಸಂಸ್ಥೆಗಳಿದ್ದು ಅದರಲ್ಲಿ 382 ಆರೋಗ್ಯ ಸಂಸ್ಥೆಗಳು ಮಾತ್ರ ನಿಯಮಾನುಸಾರ ಬಣ್ಣದ ಫಲಕಗಳನ್ನು ಅಳವಡಿಸಿಕೊಂಡಿವೆ. ನೋಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ಕೆಪಿಎಂಇ ನಿಯಮ 2009ರ ನಿಯಮ 5ರ ನೋಂದಣಿಯನ್ವಯ ವೈದ್ಯಕೀಯ ಚಿಕಿತ್ಸಾ ಪದ್ಧತಿ ವಿಧಾನ, ಸಂಸ್ಥೆಯ ಹೆಸರು, ನೋಂದಣಿ ಪ್ರಮಾಣ, ಸಂಸ್ಥೆಯ ಹೆಸರು, ಮಾಲೀಕರು, ವ್ಯವಸ್ಥಾಪಕರ ಹೆಸರು, ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕಗಳನ್ನು ಪ್ರದರ್ಶಿಸುವುದು ನಿಯಮವಿದೆ. ಆದರೆ ಕೆಲವು ನೋಂದಾಯಿತ ಖಾಸಗಿ ಸಂಸ್ಥೆಗಳು ನಾಮಫಲಕಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಇಂತಹ ಆರೋಗ್ಯ ಸಂಸ್ಥೆಗಳಿಗೆ ನೋಟಿಸ್ ನೀಡಿ, ಫಲಕಗಳ ಅಳವಡಿಸಲು ಕ್ರಮ ವಹಿಸಬೇಕು. ನಿಯಮಾನುಸಾರ ಫಲಕಗಳನ್ನು ಅಳವಡಿಸದಿದ್ದಲ್ಲಿ ಖಾಸಗಿ ಕ್ಲಿನಿಕ್‌ಗಳಿಗೆ ಹತ್ತು ಸಾವಿರ ರೂಪಾಯಿಗಳ ದಂಡ ಹಾಗೂ ಆಸ್ಪತ್ರೆ, ಆರೋಗ್ಯ ಸಂಸ್ಥಗಳಿಗೆ 50 ಸಾವಿರ ದಂಡ ವಿಧಿಸಲು ಕಟ್ಟುನಿಟ್ಟಿನ ಕ್ರಮ ವಹಿಸಿ, ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ಆಯುರ್ವೇದ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ  ಸಹಯೋಗ ಪಡೆದುಕೊಂಡು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ  ವೈದ್ಯಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ಕ್ರೂಡಿಕರಿಸಿ ಮೂರು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು. ಜಿಲ್ಲಾ ಮಟ್ಟದ ಸಮಿತಿ ಕಳೆದ 2024ರ ಅಕ್ಟೋಬರ್‌ನಲ್ಲಿ 45, ನವೆಂಬರ್‌ನಲ್ಲಿ 46 ಹಾಗೂ ಡಿಸೆಂಬರ್‌ನಲ್ಲಿ 48 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. 2025 ಜನವರಿ ತಿಂಗಳಲ್ಲಿ 50 ಹಾಗೂ ಫೆಬ್ರುವರಿಯಲ್ಲಿ 45 ಸೆಂಟರ್‌ಗಳ ತಪಾಸಣೆ ನಡೆಸಲಾಗಿದ್ದು, ಪಿಸಿಎನ್‌ಪಿಎನ್‌ಡಿಟಿ ಕಾಯ್ದೆಯಡಿಯಲ್ಲಿ 4 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ ಗುಣಾರಿ, ಐಎಮ್ಎ ಅಧ್ಯಕ್ಷರಾದ ದಯಾನಂದ ಬಿರಾದಾರ, ಸದಸ್ಯರಾದ ಡಾ.ರಾಜಶ್ರೀ ಯಲಿವಾಳ, ಪಿಸಿಪಿಎನ್.ಡಿಟಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆಯುಷ ಅಧಿಕಾರಿಗಳು, ಪಿಸಿಪಿಎನ್.ಡಿಟಿ ಸಲಹಾ ಸಮೀತಿ ಅಧ್ಯಕ್ಷರಾದ ಡಾ.ಎಸ್.ಆರ್ ಬಿದರಿ, ಸದಸ್ಯರುಗಳಾದ ಡಾ.ಎಸ್.ಎಸ್ ಕಲ್ಯಾಣಶೆಟ್ಟಿ, ಡಾ.ಜೆ.ಎಸ್ ಕಡಕೋಳ, ಡಾ.ಎಸ್.ಜಿ ರೂಡಗಿ, ಎಸ್.ಎ ಶಿವಗೊಂಡ, ವಿಜಯಾ ಬಾಳಿ, ಡಾ.ರಾಜಶೇಖರ ಮುಚ್ಚಂಡಿ, ಡಾ.ಪಿ.ಬಿ ದೇವಮಾನೆ, ಸುಮಾ ಚೌಧರಿ ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article