ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಆಡಿದ್ದಾರೆ ಎನ್ನುತ್ತಿರುವ ಮಾತಿನ ವಿಚಾರ ರಾಜಕೀಯ ಸ್ವರೂಪ ಪಡೆದಿದೆ. ಕಾಂಗ್ರೆಸ್, ಬಿಜೆಪಿ ನಾಯಕರು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿ.ಟಿ ರವಿ ಬರೀ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ಬಗ್ಗೆ ಸದನದಲ್ಲಿ ನಿತ್ಯ ಸುಮಂಗಲಿ ಪದ ಬಳಿಸಿದ್ದರು. ಮಹಿಳೆಯರಿಗೆ ಅಗೌರವ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಎಂದು ಬಿಜೆಪಿಯವರು ಒಪ್ಪಿಕೊಳ್ಳಲಿ. ನಾವು ತಕರಾರು ಮಾಡುವುದಿಲ್ಲ ಎಂದರು.
ಇದಕ್ಕೆಲ್ಲ ಕೊನೆ ಹಾಡುತ್ತೇವೆ ಎಂದು ಸಿ.ಟಿ ರವಿ ಹೇಳಿದ್ದಾರೆ ಎನ್ನುವ ಮಾತಿಗೆ ಉತ್ತರಿಸಿದ ಅವರು, ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಹೀಗೆ ಮಾತನಾಡಿದ್ದರೆ ಖಂಡಿಸುತ್ತಿದ್ದೇವು. ಆದರೆ, ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮುನಿರತ್ನ ಪ್ರಕರಣದಲ್ಲಿಯೂ ಸಮರ್ಥನೆ ಮಾಡಿಕೊಂಡರು. ಚಿಕ್ಕಮಗಳೂರು ಜನರು ಸುಸಂಸ್ಕೃತರು. ಅಂತವರ ಮಧ್ಯ ಇಂತಹ ವ್ಯಕ್ತಿ ಇರುವುದು ದುರಂತವೆಂದು ಸಿ.ಟಿ ರವಿ ವಿರುದ್ಧ ಕಿಡಿ ಕಾರಿದರು.