ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಸದಾ ರಾಜಕೀಯದಲ್ಲಿಯೇ ಸಕ್ರಿಯವಾಗಿರುವ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮೂರು ದಿನಗಳ ಕಾಲ ಯಾರನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ 7ರಿಂದ 10ರ ತನಕ ನಿಗದಿತ ಕಾರ್ಯಕ್ರಮದಲ್ಲಿ ಸಕ್ರಿಯನಾಗಿರುವುದರಿಂದ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಯಾರೂ ತಪ್ಪು ತಿಳಿಯಬಾರದು ಎಂದು ವಿನಂತಿಸುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ ಎನ್ನುವ ಚರ್ಚೆ ನಿತ್ಯ ನಡೆಯುತ್ತಲೇ ಇದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೆಹಲಿಗೆ ಹೋದರೆ ಸಾಕು ಇದಕ್ಕೆ ಮತ್ತಷ್ಟು ರಕ್ಕೆಪುಕ್ಕಗಳು ಬರುತ್ತವೆ. ಇದೀಗ ಮೂರು ದಿನ ಯಾರಿಗೂ ಸಿಗದೆ ಏನು ಮಾಡುತ್ತಾರೆ? ವೈಯಕ್ತಿಕ ಕೆಲಸವೇ ಅಥವ ರಾಜಕೀಯ ತಂತ್ರಗಾರಿಕೆ ಏನಾದರೂ ಇದ್ಯಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಮೂರು ದಿನಗಳ ಬಳಿಕ ಅವರೆ ಉತ್ತರ ನೀಡಬೇಕಿದೆ.