ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನಸೌಧ ಮುಂಭಾಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ(DCM) ಡಿ.ಕೆ ಶಿವಕುಮಾರ್ ಅವರು, ಯುನೈಟೆಡ್ ನೇಷನ್ಸ್ ಇನೋವೇಷನ್ಸ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯೂರಿಟಿ ಇನ್ ಬೆಂಗಳೂರು ಯೋಜನೆ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಕಾರ್ಯಕ್ರಮ ಹಾಗೂ 110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕಳೆದ ಏಳೆಂಟು ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಬೆಂಗಳೂರು ಜಲ(BWSSB) ಮಂಡಳಿ ಉಳಿಯಬೇಕಿದ್ದರೆ ನೀರಿನ ದರ ಏರಿಕೆ ಅನಿವಾರ್ಯ. ಈ ಬಗ್ಗೆ ಕಮಿಟಿ ಜೊತೆಗೆ ಚರ್ಚಿಸಲಾಗುವುದು ಎಂದರು.
ನೀರು, ಇಂಧನ ಈ ಎರಡು ಪ್ರಮುಖ ಖಾತೆಗಳು ನನ್ನ ಬಳಿಯೇ ಇವೆ. ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜನ್ನು ಖಾಸಗೀಕರಣ ಮಾಡುವ ಚರ್ಚೆ ನಡೆದಿತ್ತು. ಈ ಬಗ್ಗೆ ಫ್ರಾನ್ಸ್ ಗೆ ಹೋಗಿ ನೋಡಿಕೊಂಡು ಬಂದಿದ್ದೆ. ನಮ್ಮಲ್ಲಿ ಇದು ಕಷ್ಟವೆಂದು ಹೇಳಿದ್ದೆ. ಸಾಕಷ್ಟು ವಿರೋಧ ವ್ಯಕ್ತವಾಗಿ ನಂತರ ಕೈಬಿಡಲಾಯಿತು. ಬೆಂಗಳೂರಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಹೀಗಾಗಿ ನೀನರ ಬಳಕೆಯೂ ಹೆಚ್ಚಾಗಿದೆ. ಮೇಕೆದಾಟು(Mekedatu Project) ಯೋಜನೆ ಬಗ್ಗೆ ಭರವಸೆ ಇದೆ. ಆದಷ್ಟು ಬೇಗ ಅನುಷ್ಠಾನ ಮಾಡುತ್ತೇವೆ.
ನೀರಾವರಿ(Water Bill) ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ಕಾಲುವೆಗಳ ಅರ್ಧ ಕಿಲೋ ಮೀಟರ್ ಅಕ್ಕ ಪಕ್ಕದಲ್ಲಿ ಬೋರ್ ವೆಲ್ ಹಾಕುವಂತಿಲ್ಲ. ಕಾಲುವೆಯಿಂದ ನೇರವಾಗಿ ನೀರು ಪಡೆಯುವಂತಿಲ್ಲ. ಹೊಸ ಕಾನೂನಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಬೆಂಗಳೂರಿನ ಜನರಿಗೆ ನೀರು ಪೂರೈಸಲು ನಾವು ಸಿದ್ಧ. ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.