ಪ್ರಜಾಸ್ತ್ರ ಸುದ್ದಿ
ಹೊಸಪೇಟೆ(Hosapete): ಇಲ್ಲಿನ ತುಂಗಭದ್ರಾ ಆಣೆಕಟ್ಟೆಯ(tungabhadra dam) ಗೇಟ್ ವೊಂದು ಮುರಿದು ಬಿದ್ದಿದೆ. ಇದರಿಂದಾಗಿ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಡ್ಯಾಂನ 19ನೇ ಗೇಟ್ ಮುರಿದಿದೆ. ಹೀಗಾಗಿ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿಪಾತ್ರದ ಜನರಲ್ಲಿ ಆತಂಕ ಮೂಡಿದೆ. ಆದರೆ, ಅಧಿಕಾರಿಗಳು ಜನರು ಭಯ ಪಡುವ ಅಗತ್ಯವಿಲ್ಲ. ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಆಣೆಕಟ್ಟೆ ಪರಿಸ್ಥಿತಿ ತಿಳಿಯಲು ಡಿಸಿಎಂ ಹಾಗೂ ನೀರಾವರಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್(DKS) ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಲು ಇಲ್ಲಿಗೆ ಬರುತ್ತಿದ್ದಾರೆ. ಇವರ ಜೊತೆಗೆ ಹೈದ್ರಾಬಾದ್, ಚೆನ್ನೈನಿಂದಲೂ ನೀರಾವರಿ ತಜ್ಞರು, ಎಂಜಿನಿಯರ್ ಗಳು ಬರುತ್ತಿದ್ದು, ದುರಸ್ಥಿ ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕರಿಗೆ ನಿಷೇಧ
ಆಣೆಕಟ್ಟೆಯ 29 ಗೇಟ್ ಗಳಿಂದ 90 ಸಾವಿರದಿಂದ 1 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದರೂ ನದಿ ಪಾತ್ರದ ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ವಿಜಯನಗರ(Vijayanagara) ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ತಿಳಿಸಿದ್ದಾರೆ. ಆಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಬದಲಿ ಗೇಟ್ ಅಳವಡಿಸಬೇಕಾದ ತುರ್ತು ಹಿನ್ನಲೆಯಲ್ಲಿ ನೀರು ಹೊರ ಬಿಡುವುದು ಅನಿವಾರ್ಯ. ಜನರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 60 ಟಿಎಂಸಿ ನೀರು ಖಾಲಿ ಮಾಡಿದರೆ ಮಾತ್ರ ಗೇಟ್ ದುರಸ್ಥಿ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 2.50 ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡುಗಡೆ ಮಾಡಿದರೆ ಜನರಿಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.