ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿನ ಸರ್ವೇ ನಂಬರ್ 842ರ 2 ಎಕರೆ 10 ಗುಂಟೆ ಜಾಗದಲ್ಲಿನ ಮನೆಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಬೇಕು ಎಂದು ಗಡುವು ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಗುರುವಾರ ಎಸಿ ಅನುರಾಧ ವಸ್ತ್ರದ, ಡಿವೈಎಸ್ಪಿ ಎಚ್.ಎಸ್ ಜಗದೀಶ್, ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಅವರ ನೇತೃತ್ವದಲ್ಲಿ ಇಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಬಗ್ಗೆ ತಿಳಿಹೇಳಲಾಯಿತು.
ಸುಪ್ರೀಂ ಕೋರ್ಟ್ ಆಗಸ್ಟ್ 23ರೊಳಗೆ ಜಾಗ ತೆರವುಗೊಳಿಸಬೇಕು ಎಂದು ಹೇಳಿದೆ. ನನ್ನ ಮೇಲೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಇಲ್ಲಿ 13 ಕಟ್ಟಡಗಳಿವೆ, 20 ಸಣ್ಣ ಕಟ್ಟಡಗಳು, 38 ಶೆಡ್ ಗಳು ಹಾಗೂ 9 ನಿವೇಶನಗಳಿವೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಇಲ್ಲದರೆ ನಾವು ತೆರವುಗೊಳಿಸುವುದು ಅನಿವಾರ್ಯ ಎಂದು ಪುರಸಭೆ ಮುಖ್ಯಾಧಿಕಾರಿ ರಾಜಶೇಖರ್.ಎಸ್ ಹೇಳಿದರು.

ಏಕಾಏಕಿ ಇಲ್ಲಿನ ಜನರು ಖಾಲಿ ಮಾಡಿಕೊಂಡು ಹೋಗಬೇಕು ಎಂದರೆ ಹೇಗೆ, ಅವರಿಗೆ ಸಮಯ ಕೊಡಿ. ಪುರಸಭೆ ಹೆಸರಿನಲ್ಲಿನ ಎರಡ್ಮೂರು ಎಕರೆ ಜಾಗವನ್ನು ಮಾರಾಟ ಮಾಡಿ ಆ ಹಣವನ್ನು ಈ ಜಾಗದ ಮಾಲೀಕರಿಗೆ ಪರಿಹಾರ ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು. ಈ ಜಾಗದ ತೆರವುಗೊಳಿಸುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಇಲ್ಲಿಗೆ ಬಂದಿದ್ದು, ಆಗಸ್ಟ್ 23ರೊಳಗೆ ಜಾಗವನ್ನು ತೆರವುಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ ಹೇಳಿದರು.
ಈ ವೇಳೆ ಇಲ್ಲಿನ ನಿವಾಸಿಗಳು ಕಣ್ಣೀರು ಹಾಕಿದರು. ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಪುರಸಭೆ ಇಷ್ಟು ವರ್ಷಗಳ ಕಾಲ ತೆರಿಗೆ ಕಟ್ಟಿಕೊಂಡು ಬಂದಿದ್ದೇವೆ. ಲೋನ್ ತೆಗೆದುಕೊಂಡಿದ್ದೇವೆ. ಈಗ ಹೋಗಿ ಎಂದರೆ ಎಲ್ಲಿಗೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡರು.