ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ಆಟವಾಡುತ್ತಿದ್ದ ಬಾವಿಗೆ ಬಿದ್ದು ಮಕ್ಕಳಿಬ್ಬರು ಮೃತಪಟ್ಟ ದಾರುಣ ಘಟನೆ ಕೊಪ್ಪ ತಾಲೂಕಿನ ಅಮ್ಮಡಿ ಹತ್ತಿರದ ಕಾಫಿ ಎಸ್ಟೇಟ್ ನಲ್ಲಿರುವ ಕಾರ್ಮಿಕರ ಲೈನ್ ಮನೆ ಬಳಿ ಮಂಗಳವಾರ ನಡೆದಿದೆ. ಸಂಜೆ ಕೆಲಸದಿಂದ ತಾಯಿ ಕೆಲಸದಿಂದ ಮನೆಗೆ ಬಂದ ಮೇಲೆಯೇ ಪ್ರಕರಣ ಬೆಳಕಿಗೆ ಬಂದಿದೆ. ಸುನಿತಾ ಬಾಯಿ ಹಾಗೂ ಅರ್ಜುನ್ ಸಿಂಗ್ ಅವರ ಮಕ್ಕಳಾದ ಸೀಮಾ(06) ಹಾಗೂ ರಾಧಿಕಾರ(02) ಮೃತ ಕಂದಮ್ಮಗಳಾಗಿದ್ದಾರೆ.
ಮಧ್ಯಪ್ರದೇಶದ ನಜೀರಾಬಾದ್ ಮೂಲದ ಸುನಿತಾ ಬಾಯಿ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದಾರೆ. ಪತಿ ಅರ್ಜುನ್ ಸಿಂಗ್ ನಜೀರಾಬಾದ್ ನಲ್ಲಿಯೇ ಇದ್ದಾರೆ. ಈಕೆ ಮಕ್ಕಳೊಂದಿಗೆ ಕ್ಲಾಸಿಕ್ ಎಸ್ಟೇಟ್ ಕೆಲಸಕ್ಕೆ ಬಂದಿದ್ದಳು. ಮಂಗಳವಾರ ಮುಂಜಾನೆ 13 ವರ್ಷದ ಮಗನೊಂದಿಗೆ ಕೆಲಸಕ್ಕೆ ಹೋಗಿದ್ದಾಳೆ. ಆದರೆ, ಈ ಹೆಣ್ಮಕ್ಕಳಿಬ್ಬರನ್ನು ಮನೆಯಲ್ಲಿ ಬಿಟ್ಟಿದ್ದಾಳೆ. ಸಂಜೆ ಮನೆಗೆ ಬಂದಾಗ ನೋಡಿದಾಗ ಮಕ್ಕಳು ಕಾಣಿಸಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ ಸಿಕ್ಕಿಲ್ಲ.
ಅನುಮಾನದಿಂದ ಮನೆಯ ಹತ್ತಿರ ಇರುವ ಬಾವಿಗೆ ಹೋಗಿ ನೋಡಿದ್ದಾರೆ. 6 ವರ್ಷದ ಸೀಮಾ ಮೃತದೇಹ ಪತ್ತೆಯಾಗಿದೆ. 2 ವರ್ಷದ ರಾಧಿಕಾ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದರು. ಈ ಬಗ್ಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದು ದುಡಿಯುತ್ತಿದ್ದಾಗ ಪುಟ್ಟ ಮಕ್ಕಳನ್ನು ಕಳೆದುಕೊಂಡ ತಾಯಿ ನೋವು ನೋಡಲಾಗದು.