ಪ್ರಜಾಸ್ತ್ರ ಸುದ್ದಿ
ವಿಶಾಖಪಟ್ಟಣ: ಸೋಮವಾರ ರಾತ್ರಿ ಇಲ್ಲಿನ ವೈಎಸ್ಆರ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ ರೋಚಕ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಕಿಕ್ ನೀಡಿತು. ಡೆಲ್ಲಿ ತಂಡದ ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ ತಂಡಕ್ಕೆ ಆಸರೆಯಾಗಿ ನಿಂತು ಗೆಲುವಿನ ದಡ ಸೇರಿಸಿದರು. ಹೀಗಾಗಿ ಸೋಲುವುದು ಪಕ್ಕಾ ಎಂದುಕೊಂಡಿದ್ದ ಡೆಲ್ಲಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದರು.
ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಲೆಕ್ಕಾಚಾರ ಉಲ್ಟಾ ಮಾಡುವಂತೆ ಲಕ್ನೋ ತಂಡದ ಆಟಗಾರರು ಬ್ಯಾಟ್ ಬೀಸಿದರು. ಇಂಪ್ಯಾಕ್ಟ್ ಪ್ಲೇಯರ್ ಮಿಚಲ್ ಮಾರ್ಸ್ 72 ರನ್ (6 ಫೋರ್, 6 ಸಿಕ್ಸ್), ನಿಕೋಲಸ್ ಪೂರಾನ್ 75 ರನ್ (6 ಫೋರ್, 7 ಸಿಕ್ಸ್) ಅಬ್ಬರ ಬ್ಯಾಟಿಂಗ್ ನಿಂದಾಗಿ 200 ರನ್ ಗಳ ಗಡಿ ದಾಟಿತು. ನಾಯಕ ರಿಷಬ್ ಪಂತ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಡೆವಿಡ್ ಮಿಲ್ಲರ್ ಅಜೇಯ 27 ರನ್ ಬಾರಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಡಿಸಿ ಪರ ಮಿಚಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರು. ಕುಲ್ದೀಪ್ ಯಾದವ್ 2, ಮುಕೇಶ್ ಕುಮಾರ್, ನಿಗಮ್ ತಲಾ 1 ವಿಕೆಟ್ ಪಡೆದರು.
ಬಿಗ್ ಸ್ಕೋರ್ ಚೇಸ್ ಮಾಡಿದ ಡಿಸಿ ಆರಂಭದಲ್ಲಿಯೇ ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಾಕ್ ಪಾರ್ಸರ್ 1, ಡುಪ್ಲಸಿ 29, ಅಭಿಷೇಕ್ ಪೊರೆಲ್ 0, ಸಮೀರ್ ರಿಝ್ವಿ 4, ನಾಯಕ ಅಕ್ಷರ್ ಪಟೇಲ್ 24 ಹೀಗೆ ವಿಕೆಟ್ ಗಳು ಬಿದ್ದವು. ಇದರಿಂದಾಗಿ 6.4 ಓವರ್ ಗಳಲ್ಲಿ 65 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಡಿಸಿ ಅಭಿಮಾನಿಗಳು ಸೈಲೆಂಟ್ ಆಗುವಂತೆ ಆಯ್ತು. ಸ್ಟಬ್ಸ್ 34, ವಿಪ್ರಾಜ್ ನಿಗಮ್ 39 ರನ್ ಗಳಿಸಿ ಒಂದಿಷ್ಟು ಆಸರೆಯಾದರು. ಆದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಶುತೋಷ್ ಶರ್ಮಾ ಒನ್ ಮ್ಯಾನ್ ಆರ್ಮಿ ತರ ಬ್ಯಾಟ್ ಬೀಸಿ ಸಿಕ್ಕ ಅವಕಾಶ ಸದುಪಯೋಗ ಪಡೆದರು. 5 ಸಿಕ್ಸ್, 5 ಫೋರ್ ಗಳ ಮೂಲಕ 31 ಬೌಲ್ ಗಳಲ್ಲಿ ಅಜೇಯ 66 ರನ್ ಗಳಸಿ ತಂಡವನ್ನು ಗೆಲ್ಲಿಸಿ ಮಿಂಚಿದರು. ಈ ಮೂಲಕ ಪಂದ್ಯ ಕೊನೆಯ ಘಟ್ಟದ ತನಕ ಹೋಯ್ತು. 19.3 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ಸೋಲುವ ಪಂದ್ಯವನ್ನು ಡಿಸಿ ಗೆದ್ದಿತು. ಲಕ್ನೋ ಪರ ಶ್ರಾದ್ದೂಲ್ ಠಾಕೂರ್, ಎಂ.ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು.