ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ(Delhi Election) ಬಿಜೆಪಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಯುವಕನೊಬ್ಬ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಹಾಗೂ ಅಖಿಲೇಶ್ ಯಾದವ್ ಅವರ ಫೋಟೋ ಮೇಲೆ ಮುಸ್ಲಿಂ ಧರ್ಮಗುರುಗಳ ಸಾಲುಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದರಿಂದಾಗಿ ಸೋಮವಾರ ರಾತ್ರಿ ಗಲಾಟೆ ನಡೆದಿದೆ. ಯುವಕನನ್ನು ಬಂಧಿಸುವಂತೆ ಉದಯಗಿರಿ ಪೊಲೀಸ್ ಠಾಣೆ ಎದುರು ಮುಸ್ಲಿಂ ಸಮುದಾಯದ ಜನರು ಜಮಾಯಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಹಿಂಸಾಸ್ವರೂಪ ಪಡೆಯುತ್ತಿದೆ ಎನ್ನುವುದ ತಿಳಿದು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಉದಯಗಿರಿ ಸುತ್ತಮುತ್ತ 144 ಸಕ್ಷೆನ್ ಕಾಯ್ದೆ(144 Act) ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ರೀತಿ ಪೋಸ್ಟ್ ಮಾಡಿದ್ದು ತಪ್ಪು ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಯುವಕನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅವನನ್ನು ಬಿಟ್ಟು ಕಳಿಸುತ್ತಾರೆ ಎಂದು ಹೇಳಿ ಗಲಾಟೆ ಎಬ್ಬಿಸಲಾಗಿದೆ. ಸಾವಿರಾರು ಜನರು ಸೇರುತ್ತಾರೆ ಎಂದರೆ ಇದರ ಹಿಂದೆ ಏನೋ ಇದೆ. ಇದನ್ನು ಪತ್ತೆ ಹಚ್ಚಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.