ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಇಲ್ಲಿನ ಸುವರ್ಣಸೌಧದಲ್ಲಿ ಸೋಮವಾರದಿಂದ ಶುರುವಾಗಿರುವ ಚಳಿಗಾಲದ ಅಧಿವೇಶನಕ್ಕೆ ಮೊದಲ ದಿನದಿಂದಲೇ ಪ್ರತಿಭಟನೆ ಬಿಸಿ ತಟ್ಟಿದೆ. ಮಂಗಳವಾರವೂ ಅದು ಮುಂದುವರೆದಿದೆ. 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ವತಿಯಿಂದ ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕಲು ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು. ಆದರೆ, ಜಿಲ್ಲಾಡಳಿತ ರ್ಯಾಲಿಗೆ ನಿಷೇಧ ವಿಧಿಸಿ, ಪ್ರತಿಭಟನೆಗೆ ಅವಕಾಶ ನೀಡಿತ್ತು. ಹೀಗಿದ್ದರೂ ಪಂಚಮಸಾಲಿ ಸಮಾಜದ ಮುಖಂಡರು ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧದತ್ತ ಬರಲು ಯತ್ನಿಸಿದ್ದಾರೆ.
ಐದು ಸಾವಿರ ಟ್ರ್ಯಾಕ್ಟರ್ ಮೂಲಕ ರ್ಯಾಲಿ ನಡೆಸಲು ನಿರ್ಧರಿಸಿದ್ದರು. ನಿಷೇಧದ ಕಾರಣಕ್ಕೆ ಅದರ ಪ್ರಮಾಣ ಕಡಿಮೆಯಾಗಿತ್ತು. ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧದ ಕಡೆ ಹೊರಟಿದ್ದವರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದು ಮನವೊಲಿಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗದೆ ಹೋದಾಗ ವಶಕ್ಕೆ ಪಡೆದಿದ್ದಾರೆ.