ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನೊಂದವರ ನೋವಿಗೆ ಧ್ವನಿಯಾಗಿ ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದವರಿಗೂ ತಲುಪಿಸಿ ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿ ದೇಶಕ್ಕೆ ಮಾದರಿಯಾದವರು ಡಿ.ದೇವರಾಜ ಅರಸು(devaraj arasu) ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತ್ಯಾಗ, ಪ್ರೀತಿ ಜೀವನದ ಉಸಿರಾಗಿಸಿಕೊಂಡು ನೊಂದವರ, ಅಶಿಕ್ಷಿತರ, ನಿರ್ಲಕ್ಷಿತ ಸಮುದಾಯಗಳ ಪರ ಇಡೀ ಜೀವನವನ್ನು ಮೀಸಲಿಟ್ಟು, ಭೂಸುಧಾರಣೆಯ ಕಾಯ್ದೆಯಂತಹ ಮಹತ್ವ ಯೋಜನೆ ರೂಪಿಸಿದ ಮಹನೀಯರಾಗಿದ್ದಾರೆ ಎಂದು ಹೇಳಿದರು. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಉಳುವವನೆ ಭೂ ಒಡೆಯ ಎಂಬ ಕಾನೂನಿನ ಮೂಲಕ ಜೀತ ಪದ್ದತಿ ಹೋಗಲಾಡಿಸಿ ಎಲ್ಲಾ ವರ್ಗಗಳಲ್ಲೂ ಸಮಾನತೆಯ ಆಶಯವನ್ನು ಬಿತ್ತಿದ ಅರಸು ಅವರು, ಹಳ್ಳಿಯ ವಿದ್ಯಾರ್ಥಿಗಳು ನಗರಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಲು ವಸತಿನಿಲಯಗಳ ಸ್ಥಾಪನೆಗೆ ನಾಂದಿ ಹಾಡಿದವರು ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಶೋಷಿತರ ಅಭಿವೃದ್ಧಿಗಾಗಿ ಶ್ರಮಿಸಿದ ಅವರು, ಉಳುವವನೇ ಭೂ ಒಡೆಯ ಎನ್ನುವ ಭೂ ಸುಧಾರಣಾ ಕಾಯಿದೆ ಜಾರಿಗೆ ತರುವ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದಾರೆ ಅಂತಾ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಉಪನ್ಯಾಸಕ ವಿಷ್ಣು ಸಿಂಧೆ ಉಪನ್ಯಾಸ ನೀಡಿದರು. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ದೆಯಲ್ಲಿ ವಿಜೇತರಾದ ಹಾಗೂ ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ರಂಗನಾಥ ಬತ್ತಾಸೆ ಮತ್ತು ಸುನಂದಾ ಬತ್ತಾಸೆ ದಂಪತಿಗಳು ಹಾಗೂ ಸಂಗಡಿಗರಿಂದ ದೇವರಾಜ ಅರಸು ಅವರ ಜೀವನ ಮತ್ತು ಸಾಧನೆಯ ಬಗ್ಗೆ ರೂಪಕ ಪ್ರದರ್ಶಿಸಿದರು.
ವೇದಿಕೆಯ ಮೇಲೆ ಮಹಾನಗರ ಪಾಲಿಕೆಯ ಉಪಮೇಯರ್ ದಿನೇಶ್ ಹಳ್ಳಿ, ಪಾಲಿಕೆ ಸದಸ್ಯರುಗಳಾದ ಆರತಿ ಶಹಾಪೂರ, ಅಪ್ಪು ಪೂಜಾರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಅಶೋಕ್ ಘೋಣಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ಅರಣ್ಯ ಇಲಾಖೆಯ ಅಧಿಕಾರಿ ವನಿತಾ ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಸಿದ್ದು ರಾಯಣ್ಣನವರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಅಡಿವೆಪ್ಪಾ ಸಾಲಗಲ್, ದೇವೆಂದ್ರ ಮೆರೆಕರ, ವಿರೇಶ್ ಕುಲಕರ್ಣಿ, ವಿದ್ಯಾವತಿ ಅಂಕಲಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.