ಪ್ರಜಾಸ್ತ್ರ ಸುದ್ದಿ
ಸವದತ್ತಿ(Savadatti): ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಕಡ್ಡಾಯವಾಗಿ ತಾಯಿಯ ದರ್ಶನ ಸಿಗುವ ವ್ಯವಸ್ಥೆ ಪ್ರಥಮ ಆದ್ಯತೆಯಲ್ಲಿ ಒದಗಿಸಬೇಕು. ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಉಳಿದುಕೊಳ್ಳುವ ಅಚ್ಚುಕಟ್ಟಾದ ವಸತಿ ವ್ಯವಸ್ಥೆಯನ್ನು ತಿರುಪತಿ ಮಾದರಿಯಲ್ಲಿ ಕಲ್ಪಿಸಬೇಕು ಎಂದು ಹೇಳಿದರು.
ಇಲ್ಲಿ ಸಮರ್ಪಕವಾದ ವ್ಯವಸ್ಥೆ ಕಲ್ಪಿಸಿದರೆ ದೇವಿಯ ದರ್ಶನಕ್ಕೆ ಬರುವವರ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಇಲ್ಲಿ ತಳಸಮುದಾಯದವರು, ಬಡವರು, ಶ್ರಮಿಕ ವರ್ಗದವರೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಆದಾಯದಿಂದ ಭಕ್ತರಿಗೆ ಹೆಚ್ಚಿನ ಮೂಲಭೂತ ಸೌಲಭ್ಯ ಒದಗಿಸಬೇಕು. ಕಾರು, ಬೈಕಿನ ಜೊತೆಗೆ ಎತ್ತಿನಗಾಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ ಎತ್ತಿನಾಡಿ ನಿಲ್ಲಿಸಲು ವ್ಯವಸ್ಥೆ ಮಾಡಬೇಕು. ಮೇವು, ನೀರು, ನೆರಳಿನ ವ್ಯವಸ್ಥೆಯಾಗಬೇಕು.
ಪ್ರತಿವರ್ಷ 1.5 ರಿಂದ 2 ಕೋಟಿ ಭಕ್ತರು ಬರುತ್ತಾರೆ. ಅವರಿಗೆ ಆರೋಗ್ಯಯುಕ್ತ ದಾಸೋಹ ಸಿಗಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಕಸ ವಿಲೇವಾರಿ ಮಾಡಬೇಕು. ಕ್ಷೇತ್ರಕ್ಕೆ ಸೇರಿದ ಜಾಗ ಒತ್ತುವರಿಯಾಗಿದ್ದರೆ ಬಿಡಿಸಿಕೊಳ್ಳಬೇಕು. ಕಾಂಪೌಂಡ್ ಹಾಕಿ, ಫೆನ್ಸಿಂಗ್ ಹಾಕಿ ಭದ್ರತೆ ಮಾಡಿಕೊಳ್ಳಬೇಕು. ಭಕ್ತರು ಉಳಿದುಕೊಳ್ಳುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ರೋಪ್ ವೇ ಸವಲತ್ತು ಕಲ್ಪಿಸಿದರೆ ಅನುಕೂಲವಾಗುತ್ತೆ. ಈ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಸಚಿವರಾದ ಹೆಚ್.ಕೆ ಪಾಟೀಲ, ಸತಿಶ್ ಜಾರಕಿಹೊಳಿ, ರಾಮಲಿಂಗರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಇತರರು ಭಾಗವಹಿಸಿದ್ದರು.