ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸ್ಥಳೀಯ ಪ್ರತಿಭೆಗಳು ಕೂಡಿಕೊಂಡು ನಿರ್ಮಾಣ ಮಾಡುತ್ತಿರುವ ಢಣ ಢಣ ಕಾಂಚಾಣ ವೆಬ್ ಸಿರೀಸ್ ಪೋಸ್ಟರ್ ನ್ನು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಯುವ ನಟ, ನಿರ್ಮಾಪಕ ಗುರುರಾಜ ಮಠ, ಇದೊಂದು ಸೈಬರ್ ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಇದರಲ್ಲಿ ಉತ್ತರ ಕರ್ನಾಟಕದ ಕಲಾವಿದರೆ ಅಭಿನಯಿಸಿದ್ದಾರೆ. ವಿಜಯಪುರ, ಸಿಂದಗಿ ಭಾಗದ ಸುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ರಘುಚಂದ್ರ ಬಿರಾದಾರ ಅವರು ನಿರ್ದೇಶನ ಮಾಡಿದ್ದಾರೆ ಎಂದರು.
ಚಿತ್ರನಟ ಸಂತೋಷ ಉಪ್ಪಿನ, ಯುವ ಕಲಾವಿದರಾದ ಶಿವು ಕುಂಬಾರ, ಶ್ರುತಿ ಪೂಜಾರ, ಯಶವಂತ ಕೂಚಬಾಳ, ಪ್ರವೀಣ ಬಿರಾದಾರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಸರಣಿಗಳಲ್ಲಿ ಇದು ಬಿಡುಗಡೆಯಾಗಲಿದೆ. ಈಗಾಗ್ಲೇ ಸುಮಾರು 6 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ನು ಎರಡ್ಮೂರು ಲಕ್ಷ ರೂಪಾಯಿ ಖರ್ಚಾಗಬಹುದು. ಆದಷ್ಟು ಬೇಗ ವೆಬ್ ಸಿರೀಸ್ ಬಿಡುಗಡೆ ಮಾಡಲಿದ್ದೇವೆ ಅಂತಾ ತಿಳಿಸಿದರು.
ಈ ವೇಳೆ ಚಿತ್ರನಟ ಸಂತೋಷ ಉಪ್ಪಿನ, ನಿರ್ಮಾಪಕ ಭೋಜರಾಜ ದೇಸಾಯಿ, ಕಲಾವಿದರಾದ ಶಿವಾನಂದ ಕುಂಬಾರ, ನಾಗರಾಜ ಹರನೂರ, ಪ್ರಶಾಂತ ಕದ್ದರಕಿ ಸೇರಿದಂತೆ ಇತರರು ಹಾಜರಿದ್ದರು.