ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಎಸ್ಐಟಿ ಅಧಿಕಾರಿಗಳು ಬುಧವಾರ 2ನೇ ದಿನದ ಶೋಧ ಕಾರ್ಯ ನಡೆಸಿದರು. ಸಾಕ್ಷಿ ದೂರುದಾರ ತೋರಿಸಿದ 4 ಸ್ಥಳಗಳಲ್ಲಿ ಇಂದು ನೆಲ ಅಗೆಯುವ ಕೆಲಸ ಮಾಡಲಾಗಿದೆ. 20 ಕಾರ್ಮಿಕರು ನೆಲ ಅಗೆಯುವ ಕೆಲಸ ಮಾಡಿದರು. ಆದರೆ, ಎಲ್ಲಿಯೂ ಮಾನವ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿಲ್ಲವೆಂದು ಹೇಳಲಾಗುತ್ತಿದೆ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಗುರುತು ಮಾಡಿದ 13 ಜಾಗಗಳಲ್ಲಿ 1 ರಲ್ಲಿ ಅಗೆಯಲಾಗಿತ್ತು. ಯಾವುದೇ ಪುರಾವೆ ಸಿಕ್ಕಿರಲಿಲ್ಲ.
ಬುಧವಾರ 2, 3, 4 ಹಾಗೂ 5ನೇ ಜಾಗದಲ್ಲಿ ಅಗೆಯುವ ಕೆಲಸ ನಡೆಸಲಾಯಿತು. ಮೊದಲ ಸ್ಥಳದಿಂದ ಗುರುತಿನ ಚೀಟಿ, ಪರ್ಸ್, ಎಟಿಎಂ ಕಾರ್ಡ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದು ಯಾರದ್ದು, ಏನು ಅನ್ನೋದರ ಪತ್ತೆ ಕಾರ್ಯ ನಡೆದಿದೆ. ಶೋಧ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಸಂಜೆ ಎಸ್ಐಟಿ ಮುಖ್ಯಸ್ಥರಾದ ಪ್ರಣಬ್ ಮೊಹಂತಿ, ಡಿಐಜಿ ಎಂ.ಎನ್ ಅನುಚೇತ್ ಭೇಟಿ ನೀಡಿದರು. ಸಾಕ್ಷಿ ದೂರದಾರ ಧರ್ಮಸ್ಥಳದ ಮಾಜಿ ನೈರ್ಮಲ್ಯ ಕಾರ್ಮಿಕನಾಗಿದ್ದಾನೆ. 10 ವರ್ಷಗಳ ಹಿಂದೆ ನಡೆದ ಅತ್ಯಾಚಾರ, ಕೊಲೆಯಾದವರ ಶವಗಳನ್ನು ಹೂಳಲು ನನಗೆ ಒತ್ತಾಯಿಸಲಾಗಿತ್ತು ಎಂದು ಜುಲೈ 4ರಂದು ದೂರು ನೀಡಿದ್ದಾನೆ. ಜುಲೈ 19ರಂದು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ.