ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಹತ್ಯೆಗಳ ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣ ಸಂಬಂಧ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಇವರ ಸಹೋದರ ಡಿ.ಹರ್ಷೇಂದ್ರ ವಿರುದ್ಧದ ವರದಿ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ನಿರ್ಬಂಧವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಿಟಿ ಸಿವಿಲ್ ಕೋರ್ಟ್ ಹೆಚ್ಚುವರಿ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದು ಪಡಿಸಲಾಗಿದೆ.
ಸಿಟಿ ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಮಂಗಳೂರಿನ ಕೋಡಿಬೈಲ್ ವಿಳಾಸ ಹೊಂದಿರುವ ಯುಟ್ಯೂಬ್ ಚಾನಲ್ ‘ಕುಡ್ಲ ರ್ಯಾಂಪೇಜ್’ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ(32) ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ತೀರ್ಪು ನೀಡಿದೆ.
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಆಧಾರ ರಹಿತವಾಗಿ ವರದಿ ಮಾಡಲಾಗಿದೆ ಎಂದು ಹೇಳಲಾಗಿದೆ. 4,140 ಯುಟ್ಯೂಬ್ ವಿಡಿಯೋಗಳು, 932 ಫೇಸ್ ಬುಕ್ ಪೋಸ್ಟ್ ಗಳು, 3,584 ಇನ್ಸ್ಟಾಗ್ರಾಮ್ ಪೋಸ್ಟ್ ಗಳು, 108 ಸುದ್ದಿಗಳು, 41 ಟ್ವೀಟ್ ಗಳು, 37 ರೆಡ್ ಇಟ್ ಪೋಸ್ಟ್ ಗಳು ಸೇರಿದಂತೆ ಒಟ್ಟು 8, 842 ಲಿಂಗ್ ಗಳನ್ನು ನಿರ್ಬಂಧಿಸಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆಗ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿತ್ತು.