ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಈ ಹಿಂದೆ ಸಾಕಷ್ಟು ಅಪರಾಧ ಕೃತ್ಯಗಳು ನಡೆದಿದ್ದು, ನಾನೇ ನೂರಾರು ಮೃತದೇಹಗಳನ್ನು ಹೂತಿದ್ದೇನೆ ಎಂದು ಸಾಕ್ಷಿ ದೂರುದಾರನೊಬ್ಬ ತೋರಿಸಿದ ಜಾಗದಲ್ಲಿ ಮಂಗಳವಾರ ಅಗೆಯುವ ಕೆಲಸ ನಡೆದಿದೆ. ಆತ ಶವವಗಳನ್ನು ಹೂಳಲಾಗಿದೆ ಎಂದು ತೋರಿಸಿದ 13 ಜಾಗಗಳನ್ನು ಗುರುತು ಮಾಡಲಾಗಿದೆ. ಧರ್ಮಸ್ಥಳ ಸ್ನಾನಘಟ್ಟದ ಹತ್ತಿರದ ಕಾಡಿನಲ್ಲಿ ಮಂಗಳವಾರ ಮಧ್ಯಾಹ್ನ 12ಗಂಟೆಯಿಂದ ಸಂಜೆ 6 ಗಂಟೆಯ ತನಕ ನೆಲ ಅಗೆಯಲಾಗಿದೆ. 8 ಅಡಿ ನೆಲ ಅಗೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.
ಬುಧವಾರವೂ ನೆಲ ಅಗೆಯುವ ಕಾರ್ಯ ನಡೆಯಲಿದೆ. ಎಸ್ಐಟಿ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ಸೇರಿದಂತೆ ವಕೀಲರ ಸಮ್ಮುಖದಲ್ಲಿ ನೆಲ ಅಗೆಯುವ ಕೆಲಸ ಮಾಡಲಾಗಿದೆ. ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಮಳೆಯ ನಡುವೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾಕ್ಷಿ ದೂರುದಾರ ತೋರಿಸಿದ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ರಾಜ್ಯ ಪೊಲೀಸ್ ಮೀಸಲು ಪಡೆಯ ಒಂದು ತುಕಡಿಯನ್ನು ಇಲ್ಲಿ ನಿಯೋಜಿಸಲಾಗಿದೆ.