ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಕಣ ರಂಗೇರಿದೆ. ಮುಸ್ಲಿಂ ನಾಯಕರ ಬಂಡಾಯವನ್ನು ಕಾಂಗ್ರೆಸ್ ತಣ್ಣಗಾಗಿಸಿದೆ. ಆದರೆ, ಅದು ಅಂತರಾಳದಲ್ಲಿ ಯಾವ ಸ್ವರೂಪದಲ್ಲಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ತೋಟಗಾರಿಕ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಮೀರ್ ಪ್ರಚಾರಕ್ಕೆ ಬರದೆ ಇದ್ದರೂ ನಡೆಯುತ್ತದೆ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹೇಳಿದ್ದಾರಂತೆ.
ಈ ವಿಚಾರವಾಗಿ ಸಚಿವ ಜಮೀರ್, ಸಿಎಂ ಸಿದ್ದರಾಮಯ್ಯನವರ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅಲ್ಲಿಗೆ ಪ್ರಚಾರಕ್ಕೆ ಹೋಗಬೇಕೆ ಎಂದು ಪ್ರಶ್ನಿಸಿದ್ದಾರಂತೆ. ಮಲ್ಲಿಕಾರ್ಜುನ ಅವರಿಗೆ ಬೇಡವಾದರೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರಂತೆ. ಮೊದಲೇ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಇದೀಗ ಕೆಂಡ ಕಾರುತ್ತಿದ್ದಾರೆ. ಇದರ ನಡುವೆ ಇಬ್ಬರು ಸಚಿವರ ನಡುವಿನ ಮುಸುಕಿನ ಗುದ್ದಾಟ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರುತ್ತೆ ಕಾದು ನೋಡಬೇಕು.




