ಪ್ರಜಾಸ್ತ್ರ ಸುದ್ದಿ
ಇಂಡಿ/ಸಿಂದಗಿ(Indi/Sindagi): ವಿಜಯಪುರ ಜಿಲ್ಲೆಯಲ್ಲಿ ಇದೀಗ ಚಿರತೆ(Leopard) ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಯಾಕಂದರೆ ಇತ್ತೀಚೆಗೆ ಮುದ್ದೇಬಿಹಾಳ ತಾಲೂಕಿನಲ್ಲಿ ಚಿರತೆಯೊಂದು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆ ಹಾಗೂ ಅದರ ಮರಿಗಳು ದಾಖಲಾಗಿದ್ದವು. ಈಗ ಇಂಡಿ ಹಾಗೂ ಸಿಂದಗಿ ತಾಲೂಕಿನ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಸ್ಥರು ಹೊಲಗಳಿಗೆ ಹೋಗಲು ಭಯ ಪಡುವಂತಾಗಿದೆ.
ಸಿಂದಗಿ ತಾಲೂಕಿನ ದೇವರ ನಾವದಗಿ, ಆಸಂಗಿಹಾಳ ಗ್ರಾಮಗಳಲ್ಲಿ ಚಿರತೆ ಹೆಜ್ಜೆ ಗುರುತು ಮೂಡಿವೆ ಎಂದು ಹೇಳಲಾಗುತ್ತಿದೆ. ದೇವರ ನಾವದಗಿಯ ಗ್ರಾಮಸ್ಥರ ಭೀಮರಾಯ ಜನಿವಾರ ಎಂಬುವರ ಎಮ್ಮೆ ಹಾಗೂ ನಾಯಿ ತಿಂದಿದೆ ಎನ್ನುವ ಸುದ್ದಿ ಹಬ್ಬಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಈ ಭಾಗದಲ್ಲಿ ಬೋನ್ ಇಡಲಾಗಿದೆ. ಇದರಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರು ಭಯಭೀತರಾಗಿದ್ದಾರೆ.
ಇನ್ನು ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ. ಘಂಟಿ ಎಂಬುವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ವಸತಿಯ ಜನರು ಕುರಿ ಕಾಯುವ ಸಂದರ್ಭದಲ್ಲಿ ಮಂಗಳವಾರ ಸಾಯಂಕಾಲ ನೋಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸ್ಥಳಕ್ಕೆ ಡಿಆರ್ ಎಫ್ಓ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಮಹಾರಾಷ್ಟ್ರ ಭಾಗದ್ದು ಮತ್ತು ಹಳೆಯದು ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಆದರೆ, ಸಿಂದಗಿ ಹಾಗೂ ಇಂಡಿ ತಾಲೂಕಿನ ಗ್ರಾಮಸ್ಥರಲ್ಲಿ ಭಯ ಹುಟ್ಟಿದ್ದು ಮಾತ್ರ ಸತ್ಯ.