ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಕಾನೂನು ಹೋರಾಟ ಎಲ್ಲರಿಗೂ ತಿಳಿದಿದೆ. ಇದರ ನಡುವೆ ಆಂತರಿಕ ಭದ್ರತಾ ದಳದ ಡಿಐಜಿ ಡಿ.ರೂಪಾ ವಿರುದ್ಧ ಐಎಸ್ ಡಿ ಡಿಐಜಿ ವರ್ತಿಕಾ ಕಟಿಯಾರ್ ದೂರು ನೀಡಿದ್ದು, ಕೆಳಹಂತದ ಸಿಬ್ಬಂದಿಯನ್ನು ಬಳಸಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದಾರೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಐಎಸ್ ಡಿ ಡಿಜಿಪಿಗೂ ದೂರು ಕೊಟ್ಟಿದ್ದಾರೆ.
ಸೆಪ್ಟೆಂಬರ್ 6, 2024ರಲ್ಲಿ ಹೆಡ್ ಕಾನ್ಸ್ ಟೇಬಲ್ ಟಿ.ಎಸ್ ಮಂಜುನಾಥ್ ಹಾಗೂ ಗೃಹ ರಕ್ಷಕ ದಳದ ಮಲ್ಲಿಕಾರ್ಜುನ್ ಎಂಬುವರನ್ನು ಬಳಸಿಕೊಂಡು ನನ್ನ ಅನುಮತಿ ಇಲ್ಲದೆ ಕಚೇರಿ ಬಾಗಿಲು ತೆಗೆದು ಕೆಲವೊಂದಿಷ್ಟು ದಾಖಲೆಗಳನ್ನು ನನ್ನ ರೂಮಿನಲ್ಲಿ ಇರಿಸಿ ಅದರ ಫೋಟೋವನ್ನು ತೆಗೆದುಕೊಂಡು ವಾಟ್ಸಪ್ ಮೂಲಕ ಡಿ.ರೂಪಾ ಅವರಿಗೆ ಕಳಿಸಿದ್ದಾರೆ. ಇದು ನನ್ನ ಗಮನಕ್ಕೆ ಬಂದ ಬಳಿಕ ನನ್ನ ಕಚೇರಿ ಆಪ್ತ ಸಹಾಯಕ ಕಿರಣ್ ಕುಮಾರ್, ಮಲ್ಲಿಕಾರ್ಜುನ್, ಮಂಜುನಾಥ್ ಅವರನ್ನು ವಿಚಾರಿಸಿದಾಗ ಡಿ.ರೂಪಾ ಅವರ ಸೂಚನೆ ಮೇರೆಗೆ ಬಾಗಿಲು ತೆರೆದಿದ್ದೇವೆ ಎಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.