Ad imageAd image

ಎಲ್ಲ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿ ಕೇಂದ್ರ : ಆರೋಗ್ಯ ಸಚಿವ ದಿನೇಶ ಗುಂಡೂರಾವ್

Nagesh Talawar
ಎಲ್ಲ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿ ಕೇಂದ್ರ : ಆರೋಗ್ಯ ಸಚಿವ ದಿನೇಶ ಗುಂಡೂರಾವ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್ ಕಿಮೊಥೆರಪಿಯನ್ನು(Day-Care Chemotherapy) ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ ಗುಂಡುರಾವ ಹೇಳಿದರು. ನಗರದ ಜಿಲ್ಲಾ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಕಿಮೊಥೆರಪಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಈಗಾಗಲೇ ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿಗಳನ್ನು ಸ್ಥಾಪಿಸಲಾಗುತ್ತಿದೆ. ಕಿಮೋಥೆರಪಿ ಸಲುವಾಗಿ ದೂರದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ, ದೂರದ ಪ್ರಯಾಣ ಬೆಳೆಸುವ ಬದಲಿಗೆ, ಕ್ಯಾನ್ಸರ್ ರೋಗಿಗಳು ಸ್ಥಳೀಯವಾಗಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿಯೇ ಎಲ್ಲ ಚಿಕಿತ್ಸೆ ಸೌಲಭ್ಯ ಒದಗಿಸುವುದರಿಂದ ಇದು ತುಂಬ ಅನುಕೂಲಕರವಾಗಲಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಕಿಮೋಥೆರಪಿ ಡೇ ಕೇರ್ ಕೇಂದ್ರ ತೆರೆಯುವ ಮೂಲಕ ಸರ್ಕಾರ ಅನುಕೂಲ ಕಲ್ಪಿಸಿದೆ. ಇದರೊಂದಿಗೆ ಮೆಮೊಗ್ರಾಫಿ ಕೇಂದ್ರವನ್ನು ಈ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಗೊಂಡಿದ್ದು ಇದರಿಂದ ಸ್ತನ ಕ್ಯಾನ್ಸರ್ ಪ್ರಮಾಣವನ್ನು ಬಹಳಷ್ಟು ತಗ್ಗಿಸಬಹುದು. ಯಾವುದೇ ರೋಗವನ್ನು ಗುಣಪಡಿಸಲು ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹೆಚ್ಚಿದ್ದಲ್ಲಿ ರೋಗವನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಿದ್ದಲ್ಲಿ ಗುಣಪಡಿಸಬಹುದಾಗಿದ್ದು, ಈ ನಿಟ್ಟಿನಲ್ಲಿ  ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಲು ಅವಶ್ಯಕವಿರುವ ಯಂತ್ರೋಪಕರಣಗಳನ್ನು ಸಹ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಇದರಿಂದ ತಪಾಸಣೆಗೊಳಪಡಿಸಿ ರೋಗ ಪರೀಕ್ಷಿಸಲು ಅನುಕೂಲವಾಗಲಿದೆ. ಜಿಲ್ಲೆಯ ಸಾರ್ವಜನಿಕರು ನಗರದ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಕಿಮೋಥೆರಪಿ ಹಾಗೂ ಮೆಮೊಗ್ರಾಫಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು  ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ನಿರ್ದೇಶಕಿ ಡಾ.ತ್ರಿವೇಣಿ ಎಂ.ಜಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತ್ ಗುಣಾರಿ ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಒದಗಿಸುವ ಸೌಲಭ್ಯ ಕುರಿತಾಗಿ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ನೀಡುತ್ತಿರುವ ಔಷಧೋಪಚಾರ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾಹಿತಿ ನೀಡಿದರು.

WhatsApp Group Join Now
Telegram Group Join Now
Share This Article