ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ, ವಿಜಯಪುರ ಜಿಲ್ಲಾ ಸಮಿತಿ ಹಾಗೂ ತಾಲೂಕು ಘಟಕ ಸಿಂದಗಿ ವತಿಯಿಂದ ಡಿಸೆಂಬರ್ 31 ಬುಧವಾರ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು. ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಹಳೆ ಸಿಡಿಪಿಒ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಪಂಚಾಯ್ತಿ ಇಒ ರಾಮು.ಜಿ ಅಗ್ನಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ವಿಕಲಚೇತನರು ಸಹ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಎಲ್ಲರಂತೆ ಅವರಲ್ಲಿಯೂ ಸಾಮರ್ಥ್ಯ, ಪ್ರತಿಭೆ ಇದೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ತಾಲೂಕು ಪಂಚಾಯ್ತಿಯಲ್ಲಿ ಶೇಕಡ 15ರಷ್ಟು ಮೀಸಲಾತಿ ಕ್ರಿಯಾಯೋಜನೆ ಮಾಡಿ ಸಾಧನ ಸಲಕರಣೆಗಳನ್ನು ವಿತರಣೆ ಮಾಡಿದ್ದೇವೆ ಎಂದರು.
ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘು ಹುಬ್ಬಳ್ಳಿ ಮಾತನಾಡಿ, ಡಿಸೆಂಬರ್ 1ರಿಂದ 31ರ ತನಕ ಎಲ್ಲೆಡೆ ವಿಶ್ವ ವಿಕಲಚೇತನರ ದಿನವನ್ನು ಆಚರಿಸಲಾಗುತ್ತೆ. ಇದನ್ನು ವಿಶ್ವ ಸಂಸ್ಥೆಯಿಂದಲೇ ಘೋಷಿಸಲಾಗಿದೆ. ಯಾಕಂದರೆ, ವಿಕಲಚೇತನರು ಸಮಾಜದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು, ಅವರ ಸರ್ವತ್ತೋಮಕ ಅಭಿವೃದ್ಧಿ ಮಾಡಬೇಕು ಎನ್ನುವ ಸಲುವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಈ ವೇಳೆ ವಿಕಲಚೇತನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಪುರದ ಪ್ರಕಾಶ ಬಿರಾದಾರ, ಸಿಂದಗಿಯ ತಶ್ವೀನ ನದಾಫ, ಮುದ್ದೇಬಿಹಾಳದ ಸಿದ್ದಪ್ಪ ಮೇಟಿ, ಬಸವನಬಾಗೇವಾಡಿಯ ನಾಗೇಶ ಗಬ್ಬೂರ, ಇಂಡಿಯ ನಾಗಮ್ಮ ವರಕನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ವಿಠ್ಠಲ ಕರ್ಜಗಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲಿಕರಣ ಅಧಿಕಾರಿ ಜಗದೀಶ.ಕೆ, ಮಹಿಳಾ ಸಂಘದ ವಿಜಯಪುರ ಅಧ್ಯಕ್ಷೆ ರಶ್ಮಿ ಚಿತ್ತವಾಡಗಿ, ಆಲಮೇಲ ಅಧ್ಯಕ್ಷ ವಿಠ್ಠಲ ಬಾಗೇವಾಡಿ, ಸಿಂದಗಿ ಅಧ್ಯಕ್ಷ ಸುರೇಶ ಜವಳಿ, ಸಿದ್ದರಾಮ ಕಲ್ಲೂರ, ರವಿ ರಾಠೋಡ, ಎಸ್.ಕೆ ಘಾಟೆ ಮಾತನಾಡಿದರು ಮುತ್ತುರಾಜ ಸಾತಿಹಾಳ, ಪರಶುರಾಮ ಬೋಸ್ಲೆ, ಸಿದ್ದಣ್ಣ ಕಲ್ಲೂರ, ಶಿವಲಿಂಗಪ್ಪ ನಾಯ್ಕೋಡಿ, ಪರಶುರಾಮ ಯಲಗೋಡ, ಸಿದ್ದಯ್ಯ ಮಠ, ಸುದೀರ ಭಜಂತ್ರಿ, ಯಮನಪ್ಪ ದೊಡಮನಿ, ಸಬೀಯಾ ಮರ್ತೂರ, ಭೀಮಾಜಿ ಕುಲರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




