Ad imageAd image

ಕನ್ನಡ ನಾಮಫಲಕ ಇಲ್ಲದಿದ್ದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ ಟಿ.ಭೂಬಾಲನ್

ಲ್ಲಾಡಳಿತದಿಂದ ನವೆಂಬರ್ 1ರಂದು ಆಚರಿಸುವ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿಷ್ಠೆಯೊಂದಿಗೆ ಕಡ್ಡಾಯವಾಗಿ

Nagesh Talawar
ಕನ್ನಡ ನಾಮಫಲಕ ಇಲ್ಲದಿದ್ದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ ಟಿ.ಭೂಬಾಲನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾಡಳಿತದಿಂದ ನವೆಂಬರ್ 1ರಂದು ಆಚರಿಸುವ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿಷ್ಠೆಯೊಂದಿಗೆ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡಾಭಿಮಾನ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು. ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಡಿನ ಅತಿ ಮುಖ್ಯವಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ, ವಿವಿಧ ಕನ್ನಡ ಪರ ಸಂಘಟನೆಗಳು, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.

ಗೈರಹಾಜರಾಗುವ ಅಧಿಕಾರಿಗಳಿಗೆ ನೋಟಿಸ್ : ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳುವ ತಾಯಿ ಭುವನೇಶ್ವರ ಭಾವಚಿತ್ರ ಮೆರವಣಿಗೆ ಹಾಗೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದರು. ಕಾರ್ಯಕ್ರಮದಕ್ಕೆ ಗೈರ ಹಾಜರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಿ, ಗೈರಾದ ಅಧಿಕಾರಿಗಳ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ರಾಜ್ಯೋತ್ಸವ ಕಾರ್ಯಕ್ರಮದ ವಿವಿಧ ಸಿದ್ಧತೆಗಳ ವ್ಯವಸ್ಥೆಗೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ರಾಜ್ಯೋತ್ಸವ ಸಂದೇಶ ತಯಾರಿಗಾಗಿ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಅಕ್ಟೋಬರ್ 25ರೊಳಗಾಗಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ರಾಜ್ಯೋತ್ಸವ ಕಾರ್ಯಕ್ರಮದ  ಅಂಗವಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕನ್ನಡ ಭಾಷೆ, ನೆಲ, ಜಲ ಕುರಿತು ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಕ್ವೀಜ್ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಿ, ಅತ್ಯುತ್ತಮ 3 ಜಿಲ್ಲಾ ಮಟ್ಟದ ವಿಜೇತರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಲಾಯಿತು. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆ ಒಳಗೊಂಡಿರಬೇಕು. ಇದೇ ಅಕ್ಟೋಬರ್ 30ರೊಳಗೆ ಜಿಲ್ಲೆಯ ಎಲ್ಲ ನಾಮಫಲಕಗಳು ಕನ್ನಡ ಭಾಷೆಯನ್ನು ಒಳಗೊಂಡಿರಬೇಕು. ಅಕ್ಟೋಬರ್ 31ರ ನಂತರ ಕನ್ನಡ ಭಾಷೆ ಒಳಗೊಳ್ಳದ ನಾಮಫಲಕಗಳನ್ನು ಮುಟ್ಟುಗೊಲು ಹಾಕಿ, ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಕನ್ನಡ ನಾಮಫಲಕ ಅಳವಡಿಕೆಗೆ ಜಾಗೃತಿ : ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿ, ಶಾಲೆ, ಆಸ್ಪತ್ರೆ ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಪಲಕ ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳೊಂದಿಗೆ ಇದೇ ಅಕ್ಟೋಬರ್ 20 ರಂದು ಜಾಗೃತಿ ಹಮ್ಮಿಕೊಳ್ಳಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಂಜಾರಾ ಕ್ರಾಸ್‌ದಿಂದ ಆರಂಭಗೊಳಿಸಿ, ನಗರದ ವಿವಿಧೆಡೆ ಇರುವ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.

ರಾಜ್ಯೋತ್ಸವ ಕಾರ್ಯಕ್ರಮ ಪೂರ್ವಸಿದ್ಧತೆ : ನವೆಂಬರ್ 1ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಹಾಗೂ ತಾಯಿ ಭುವನೇಶ್ವರ ಮೆರವಣಿಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ರಸ್ತೆ, ವೃತ್ತಗಳ ಸ್ವಚ್ಛತೆ, ದೀಪಾಂಲಕಾರ ವ್ಯವಸ್ಥೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ, ಆಸನಗಳ ವ್ಯವಸ್ಥೆ,  ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನ, ಧ್ವನಿವರ್ಧಕ, ಸೌಂಡ್‌ಸಿಸ್ಟಮ್ ವ್ಯವಸ್ಥೆ, ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ರಾಜ್ಯೋತ್ಸವ ಅಂಗವಾಗಿ ವಿವಿಧ ಇಲಾಖೆಗಳಿಂದ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನೊಳಗೊಂಡ ಸ್ತಬ್ಧಚಿತ್ರ ನಿರ್ಮಾಣ ಹಾಗೂ ವಿವಿಧ ಸರ್ಕಾರಿ ಕಚೇರಿಗಳನ್ನು ದೀಪಾಲಂಕಾರಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕಾಯಕ್ರಮದ ಆಮಂತ್ರಣ ಪತ್ರಿಕೆ, ಶಿಷ್ಠಾಚಾರದಂತೆ ಜನಪ್ರತಿನಿಧಿಗಳಿಗೆ ಆಹ್ವಾನ, ವ್ಯವಸ್ಥಿತವಾಗಿ ನಾಡಗೀತೆ, ಸಾಮೂಹಿಕ ಕವಾಯತು, ಪಥಸಂಚಲನ, ಎನ್‌ಸಿಸಿ,ಎನ್‌ಎಸ್‌ಎಸ್, ಸ್ಕೌಟ್ಸ್ ಆಂಡ್ ಗೈಡ್ಸ್, ವಿವಿಧ ಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರಿಗೆ ವ್ಯವಸ್ಥೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಲ್ಪೋಪಹಾರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಂಜೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಫಯಾಜ ಕಲಾದಗಿ, ಸೋಮನಗೌಡ ಕಲ್ಲೂರ, ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ರಮೇಶ ಕುಲಕರ್ಣಿ, ದಯಾನಂದ ಸಾವಳಗಿ, ದಸ್ತಗೀರ ಸಾಲೋಟಗಿ ಸೇರಿದಂತೆ ವಿವಿಧ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಸಲಹೆಗಳನ್ನು ನೀಡಿದರು.

WhatsApp Group Join Now
Telegram Group Join Now
Share This Article