ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಜೂನ್ 8, 2020ರಲ್ಲಿ ಮಲಾಡ್ ನಲ್ಲಿರುವ ವಸತಿ ಕಟ್ಟಡದ 14ನೇ ಮಹಡಿಯಿಂದ ಬಿದ್ದು ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅನ್ನೋ ಯುವತಿ ಸಾವನ್ನಪ್ಪಿದ್ದಳು. ಇದು ಆಕಸ್ಮಿಕ ಸಾವು ಎಂದು 2023ರಲ್ಲಿ ಪೊಲೀಸರು ವರದಿ ಸಲ್ಲಿಸಿದ್ದರು. ಮಗಳ ಸಾವಿನ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ತಂದೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಶಿವಸೇನೆ(ಯುಬಿಟಿ) ಯುವ ನಾಯಕ, ಮಾಜಿ ಸಚಿವ ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಂಚೋಲಿ, ಡಿನೊ ಮೋರಿಯಾ ವಿರುದ್ಧ ನಾರ್ಕೊ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಆದಿತ್ಯ ಠಾಕ್ರೆ, ಸೂರಜ್ ಪಂಚೋಲಿ, ಡಿನೊ ಮೋರಿಯಾ, ಠಾಕ್ರೆ ಅಂಗರಕ್ಷಕ ಸೇರಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 15 ತಿಂಗಳಿನಿಂದ ತನಿಖೆ ನಿಂತು ಹೋಗಿದೆ. ನ್ಯಾಯ ಸಿಗುವ ತನಕ ನಾನು ಸುಮ್ಮನಿರುವುದಿಲ್ಲ. ಎಸ್ಐಟಿ ರಚನೆಯಿಂದಲೂ ಏನೂ ಆಗಿಲ್ಲ. ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರ ನಿಷ್ಕ್ರಿಯವಾಗಿತ್ತು. ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇನೆ. ಇದರಲ್ಲಿ ಪ್ರಭಾವಿಗಳ ಪಾತ್ರವಿದೆ. ಹೀಗಾಗಿ ನನಗೆ ಮತ್ತು ನಮ್ಮ ವಕೀಲರಿಗೆ ರಕ್ಷಣೆ ಕೊಡಿ. ನ್ಯಾಯ ಸಿಗುತ್ತೆ ಎನ್ನುವ ನಂಬಿಕೆಯಿದೆ ಎಂದು ಮೃತ ದಿಶಾ ತಂದೆ ಸತೀಶ್ ಹೇಳಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಮ್ಯಾನೇಜರ್ ಆಗಿಯೂ ದಿಶಾ ಸಾಲಿಯನ್ ಕೆಲಸ ಮಾಡುತ್ತಿದ್ದಳು.