ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಲುವೆ ಜಾಲಗಳ ಮೂಲಕ ಕೆರೆ ತುಂಬಿಸುವ ಸಂದರ್ಭದಲ್ಲಿ ಕುಡಿಯುವ ನೀರು ಅನ್ಯ ಕಾರ್ಯಕ್ಕೆ ಬಳಕೆ ಹಾಗೂ ನೀರು ಪೋಲಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸೂಚನೆ ನೀಡಿದರು. ಜಿಲ್ಲೆಯ ವಿವಿಧ ತಾಲೂಕಾ ತಹಶೀಲ್ದಾರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಗುರುವಾರ ನಡೆಸಿದರು. ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಂಡು ಮುಂದಿನ ಜೂನ್‌ವರೆಗೆ ಯಾವುದೇ ಸಮಸ್ಯೆಯಾಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ನೀರು ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಿಬೇಕು. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಯಾವುದೇ ಅಡೆ-ತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ತಂಡವಾಗಿ ಯೋಜನೆ ರೂಪಿಸಿಕೊಂಡು ಕಾರ್ಯತತ್ಪರವಾಗಿರಬೇಕು. ಗ್ರಾಮ ಪಂಚಾಯತಿಯ ಹಂತದಲ್ಲಿಯೂ ಅಗತ್ಯ ಮಾಹಿತಿ ಕ್ರೋಢೀಕರಿಸಿ, ಆದಷ್ಟು ಟ್ಯಾಂಕರ್ ಬಳಕೆಯಾಗದಂತೆ ನೋಡುಕೊಳ್ಳಿ. ಬಹುಹಳ್ಳಿ ಕುಡಿಯುವ ನೀರಿನ ಕೆರೆ ಸೇರಿದಂತೆ ಜಿಲ್ಲೆಯ ಕೆರೆ ತುಂಬಿಟ್ಟುಕೊಳ್ಳಬೇಕು.
ಜಿಲ್ಲೆಯ ತಹಶೀಲ್ದಾರರು ತಮ್ಮ ಹಂತದಲ್ಲಿ ಈ ವಾರದಲ್ಲಿ ಸಭೆ ನಡೆಸಿ, ಬೇಸಿಗೆ ಸಂದರ್ಭದಲ್ಲಿ ಪ್ರತಿ 15 ದಿನಗಳೊಗೊಮ್ಮೆ ಸಭೆ ನಡೆಸಿ, ಗ್ರಾಮ ಮಟ್ಟದ ಸಮಸ್ಯೆ ಖುದ್ದಾಗಿ ಅರಿಯಬೇಕು. ಸಭೆ ನಡೆಸಿದ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು. ಪಿಡಿಒ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸುವಂತೆ ಅವರು ಸೂಚಿಸಿದರು. ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದಂತೆ ಖುದ್ದಾಗಿ ಪರಿಶೀಲನೆ ನಡೆಸಬೇಕು. ಜಿಲ್ಲೆಯಲ್ಲಿರುವ ಬೋರವೆಲ್ಗಳ ಮಾಹಿತಿ ಕ್ರೋಢಿಕರಿಸಬೇಕು. ಚಾಲ್ತಿಯಲ್ಲಿರುವ ಬೋರವೆಲ್‌ಗಳ ಪರಿಶೀಲನೆ ನಡೆಸಬೇಕು. ದುರಸ್ತಿ ಅವಶ್ಯಕತೆ ಇರುವ ಬೋರವೆಲ್‌ಗಳ ದುರಸ್ತಿಗೆ ಕ್ರಮ ವಹಿಸಬೇಕು. ಹೆಸ್ಕಾಂ ವಸತಿ ನಿಲಯಗಳಲ್ಲಿ ಕುಡಿಯುವ ನೀರಿನ ಬೋರವೆಲ್ ವಿದ್ಯುತ್ ಸಮಸ್ಯೆ ಇದ್ದಲ್ಲಿ ಹೆಸ್ಕಾಂದಿಂದ ಪರಿಹರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಅರ್ಜನಾಳ ಕೆರೆಗೆ ಮೂರು ದಿನ ನೀರು ಬಂದಿದೆ. ಕೆನಾಲ್ ಜಾಲದ ಮೂಲಕ ನೀರು ಒದಗಿಸಲು ಕುಡಿಯುವ ನೀರು ಐಸಿಸಿ ಸಭೆಯ ನಿರ್ಧಾರದಂತೆ ನೀರು ಹರಿಸುವ ಸಂದರ್ಭದಲ್ಲಿ ಎಲ್ಲಾ ಕೆರೆಗಳನ್ನು ತುಂಬಿಕೊಳ್ಳಬೇಕು. ಇಂಡಿ, ಚಡಚಣ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಉಪವಿಭಾಗಾಧಿಕಾರಿಗಳು ಸಭೆ ನಡೆಸಬೇಕು. ಕುಡಿಯುವ ನೀರಿಗೆ ಹೆಸ್ಕಾಂ ವತಿಯಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು. ರೈತರಿಗೆ ಪರಿಹಾರ ಒದಗಿಸುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಯಾವುದೇ ಬ್ಯಾಂಕ್ ಹಂತದ ಸಮಸ್ಯೆಗಳಿದ್ದಲ್ಲಿ, ಗ್ರಾಮ ಆಡಳಿತಾಧಿಕಾರಿಯೊಂದಿಗೆ ಬ್ಯಾಂಕಿಗೆ ಹೋಗಿ ಪರಿಹರಿಸಿ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು. ಯಾವುದೇ ಬಾಕಿ ಉಳಿಸಿಕೊಳ್ಳದೇ ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔಧ್ರಾಮ, ಇಂಡಿ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಗೋಣಸಗಿ, ಹೆಸ್ಕಾಂನ ಅಧಿಕ್ಷಕ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ ಸೇರಿ ವಿವಿಧ ತಾಲೂಕಿನ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.




