ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ವಸತಿ ನಿಲಯಗಳು ಮಕ್ಕಳ ಭವಿಷ್ಯ ರೂಪಿಸುವ ಕಲಿಕಾ ಕೇಂದ್ರಗಳಾಗಿದ್ದು, ಈ ಕೇಂದ್ರಗಳಲ್ಲಿ ಮಕ್ಕಳ ಓದಿಗೆ ಪೂರಕವಾಗಿ ಅವರ ಉತ್ತಮ ವ್ಯಕ್ತಿತ್ವ ರೂಪಿಸಲು ಮನೆಯ ವಾತಾವರಣ ನಿರ್ಮಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ 2025-26ನೇ ಸಾಲಿನ ವಸತಿ ನಿಲಯ ವಾಸ್ತವ್ಯ ಹಾಗೂ ವಿವಿಧ ವಿನೂತನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹಾಸ್ಟೆಲ್ ಮೆಂಟರ್ ಗಳಾಗಿ ನೇಮಿಸಲಾಗಿದೆ. ಬಿಡುವು ಮಾಡಿಕೊಂಡು ನಿಯೋಜಿಸಿದ ವಸತಿ ನಿಲಯಗಳಿಗೆ ಆಗಾಗ ತೆರಳಿ, ಮಕ್ಕಳೊಂದಿಗೆ ಬೆರೆತು ಅವರ ಕಲಿಕೆ ಮನೋಸ್ಥೈರ್ಯ ಬೆಳೆಸುವುದರ ಜೊತೆಗೆ ನಿಲಯ ಪಾಲಕರ ಜೊತೆಗೂಡಿ ಹಾಸ್ಟೆಲ್ ಸುಧಾರಣೆ ಮಾಡುತ್ತಿದ್ದಾರೆ. ಅಲ್ಲಿ ಬೇಕಾಗಿರುವ ಪಾಠೋಪಕರಣ, ಪಿಠೋಪಕರಣ ಮನೋಬಲ ಹೆಚ್ಚಿಸುವ ಮಾನಸಿಕ ದೃಢತೆ ಹೊಂದಲು ಒತ್ತಡ ನಿರ್ವಹಣಾ ಕುಶಲಗಳಾಗಿಯೂ, ಆಯಾ ವಸತಿ ನಿಲಯದ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡಲಾಗುತ್ತಿದೆ. ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಔಷಧೋಪಚಾರ ಒದಗಿಸಿಕೊಟ್ಟು ಮಕ್ಕಳಲ್ಲಿ ನಮ್ಮೊಂದಿಗಿದ್ದಾರೆ ಎಂಬ ಮನೋಭಾವ ಹೊಂದುವ ಜೊತೆಗೆ ಮನೆಯಿಂದ ದೂರ ಇರುವ ಭಾವನೆ ತಾಳದೇ ಎಲ್ಲರೊಂದಿಗೂ ಬೆರೆಯುವ ಸದಾವಕಾಶ ಹಾಸ್ಟೆಲ್ ಮೆಂಟರ್ಸ್ ಅವರು ಸ್ವಯಂ ಪ್ರೇರಿತರಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಇದೆ ವೇಳೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಂದಗಿ ತಾಲೂಕಿನ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ, ಬಸವನ ಬಾಗೇವಾಡಿ ತಾಲೂಕಿನ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ನಿರಾಶ್ರೀತರ ಪರಿಹಾರ ಕೇಂದ್ರದ ಪದ್ಮಜಾ ಪಾಟೀಲ, ಟಿ.ಬಿ.ಮಂಟೂರ, ಅರವಿಂದ ಲಂಬು, ಕೆ.ಬಿ ಕೋರೆ, ಲೆಕ್ಕ ಅಧೀಕ್ಷಕ ಎಂ.ಟಿ ಬಿರಾದಾರ, ಸತೀಶ ಸಜ್ಜನ,ಸದಾನಂದ ಬಡಿಗೇರ ವಿವಿಧ ತಾಲೂಕಿನ ಅಧಿಕಾರಿಗಳು, ವಾರ್ಡನ್ ಇದ್ದರು.




