ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಪ್ರವಾಹ ಪೀಡಿತಕ್ಕೊಳಗಾಗಬಹುದಾದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಹಾಗೂ ನಿಡಗುಂದಿ ತಾಲೂಕಿನ ಮಸೂತಿ ಹಾಗೂ ಯಲಗೂರಕ್ಕೆ ಶನಿವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪ್ರವಾಹ(Flood) ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಹೊಳೆಮಸೂತಿ ಕೆನಾಲ್ ಹತ್ತಿರ ಕೆಲವು ತಾಂತ್ರಿಕ ತೊಂದರೆಯಿಂದ ನೀರು ರೈತರ ಹೊಲಗಳಿಗೆ ಹರಿಯುತ್ತಿರುವುದರಿಂದ ಸಮಸ್ಯೆಯಾಗಿರುವುದಾಗಿ ರೈತರು ದೂರು ಸಲ್ಲಿಸಿದ್ದು, ಈ ಕುರಿತು ಕೂಡಲೇ ದುರಸ್ತಿಗೊಳಿಸಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಈಗಾಗಲೇ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎನ್‌ಡಿಆರ್‌ಎಫ್(NDRF) ಮಾರ್ಗಸೂಚಿಯನ್ವಯ ಮನೆಹಾನಿ, ಜನ-ಜಾನುವಾರು ಹಾನಿಗೆ(loss) ಪರಿಹಾರ ನೀಡಲು ಅವಕಾಶವಿದ್ದು, ಸೂಕ್ತ ಪರಿಶೀಲನೆ ನಡೆಸಿ ಸಮೀಕ್ಷೆ ಕಾರ್ಯ ನಡೆಸಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ 3 ತಾಲೂಕಿನ 120 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೀರು ಹರಿಯುತ್ತಿದೆ. ಜಿಲ್ಲೆಯಲ್ಲಿ ಕೃಷ್ಣಾ(Krishna river) ನದಿಗೆ 5 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಹರಿಯುವುದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ಕಳೆದ 2019ರಲ್ಲಿ ಹೆಚ್ಚಿನ ನೀರು ಹಳ್ಳಿಗಳಲ್ಲಿ ಹರಿದು ಸಮಸ್ಯೆ ಉಂಟಾಗಿತ್ತು. ಈ ಸಲ ಅಂತಹ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳೊಂದಿಗೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆಲಮಟ್ಟಿಗೆ 2.90 ಲಕ್ಷ ಸಾವಿರ ಕ್ಯೂಸೆಕ್, ಒಳ ಹರಿವು 3 ಲಕ್ಷ ಕ್ಯೂಸೆಕ್ ಇದೆ. ಹಿಂದಿನ ದಿನಕ್ಕೆ ಹೋಲಿಸಿದರೆ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿದೆ. ನೀರಿನ ಮಟ್ಟ ಹೆಚ್ಚಾಗಲಿ ಕಡಿಮೆಯಾಗಲಿ ತೀವ್ರ ನಿಗಾ ಸಹ ಇಡಲಾಗಿದೆ. ಸಾರ್ವಜನಿಕರು ಸಹ ಮುಂಜಾಗ್ರತಾ ಕ್ರಮ ಪಾಲಿಸಿಕೊಂಡು ಎಚ್ಚರಿಕೆಯಿಂದಿರಲು ಅವರು ಮನವಿ ಮಾಡಿಕೊಂಡರು.
ಈ ವೇಳೆ ಮುದ್ದೇಬಿಹಾಳ ತಾಲೂಕಿನ ಉಸ್ತುವಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಹಶೀಲ್ದಾರರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.