ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ಸಂಬಂಧಿಸಿದ ಇಲಾಖೆಗಳು ಸಮನ್ವಯ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಳ್ಳಬಟ್ಟಿ ಸರಾಯಿ ಹಾಗೂ ಅಕ್ರಮ ಮದ್ಯ ಮಾರಾಟವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕಳ್ಳಭಟ್ಟಿ ಸಾರಾಯಿ ತಯಾರಿಕೆ ಸ್ಥಳಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಕಳ್ಳಬಟ್ಟಿ ಸಾರಾಯಿ ಕಡಿವಾಣಕ್ಕೆ ಕ್ರಮ ವಹಿಸುವಂತೆ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮಾರಾಟ ಸಂಗ್ರಹಣ ಬಗ್ಗೆ ನಿಗಾ ವಹಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅಗತ್ಯ ತಿಳುವಳಿಕೆ ಮೂಡಿಸಬೇಕು. ಸೇವನೆಗೊಳಗಾದವರಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮೂಲಕ ಪರೀಕ್ಷೆಗೆ ಒಳಪಡಿಸಲು ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಮಾದಕ ದ್ರವ್ಯ ಬೆಳೆಯುವಂತಹ ಸಸಿ, ಗಿಡಗಳ ಮೇಲೆ ಅರಣ್ಯ ಇಲಾಖೆ ನಿರಂತರವಾಗಿ ನಿಗಾ ಇರಿಸಬೇಕು. ಇಂತಹ ಸಸಿ-ಗಿಡಗಳು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನಿಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಔಷಧದ ಮಳಿಗೆಗಳಲ್ಲಿ ಕಡ್ಡಾಯವಾಗಿ ವೈದ್ಯರ ಅನುಮತಿ ಪಡೆದು ಔಷಧ ಮಾರಾಟಕ್ಕೆ ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು ಎಂದರು. ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ 2023ರಲ್ಲಿ 29 ಪ್ರಕರಣಗಳನ್ನು ದಾಖಲಿಸಿ, 296 ಕೆಜಿ 403 ಗ್ರಾಂ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ. 200 ಕೆಜಿ 400 ಗ್ರಾಂ ಗಾಂಜಾ ನಾಶಪಡಿಸಲಾಗಿದೆ. 2024ರಲ್ಲಿ 28 ಪ್ರಕರಣಗಳನ್ನು ದಾಖಲಿಸಿಕೊಂಡು, 297 ಕೆಜಿ 872 ಗ್ರಾಂ ಗಾಂಜಾ ಜಪ್ತಿ ಮಾಡಿದ್ದು 373 ಕೆಜಿ 574 ಗ್ರಾಂ ಗಾಂಜಾ ನಾಶಪಡಿಸಲಾಗಿದೆ. 2025ರಲ್ಲಿ 15 ಪ್ರಕರಣಗಳನ್ನು ದಾಖಲಿಸಿ 239 ಕೆಜಿ 862 ಗ್ರಾಂ ಗಾಂಜಾ ಜಪ್ತಿ ಮಾಡಿದ್ದು ಈ ಅವಧಿಯಲ್ಲಿ 283 ಕೆಜಿ 808 ಗ್ರಾಂ ಗಾಂಜಾ ಹಾಗೂ 18 ಕೆಜಿ 432 ಗ್ರಾಂ ಅಫೀಮು ವಶಪಡಿಸಿಕೊಂಡು ನಾಶ ಪಡಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧ ವಸ್ತ್ರದ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂ ಬಾಬಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.