ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮೈಸೂರು ಅಭಿವೃದ್ಧಿ(MUDA) ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮದ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸಲು ಸಜ್ಜಾಗಿದೆ. ಆಗಸ್ಟ್ 3 ದಿನಾಂಕ ನಿಗದಿಯಾಗಿದೆ. ಇದಕ್ಕೆ ದೋಸ್ತಿ ಪಕ್ಷ ಜೆಡಿಎಸ್ ಅಪಸ್ವರ ತೆಗೆದಿದೆ. ನಮಗೆ ಹೇಳದೆ ಕೇಳದೆ ಪಾದಯಾತ್ರೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜೊತೆ ಪಾದಯಾತ್ರೆ ಮಾಡಬೇಕಾ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HDK) ಆಕ್ರೋಶ ಹೊರ ಹಾಕಿದ್ದಾರೆ.
ಪ್ರೀತಮಗೌಡ ಯಾರು? ಹಾಸನದ ಬೀದಿ ಬೀದಿಯಲ್ಲಿ ಪೆನ್ ಡ್ರೈವ್(Pen drive) ಸಿಗಲು ಕಾರಣನಾದ ವ್ಯಕ್ತಿ. ಇಂತವರ ಜೊತೆಗೆ ನಾನು ಪಾದಯಾತ್ರೆ ಮಾಡಬೇಕಾ? ವೇದಿಕೆ ಹಂಚಿಕೊಳ್ಳಬೇಕಾ? ಪಾದಯಾತ್ರೆ ಬಗ್ಗೆ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಇದಕ್ಕೆ ನಮ್ಮ ಬಹಿರಂಗ ಬೆಂಬಲವೂ ಇಲ್ಲ, ನೈತಿಕ ಬೆಂಬಲವೂ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಪ್ರವಾಹ(Flood) ಸ್ಥಿತಿ ನಿರ್ಮಾಣವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿದ್ದಾರೆ. ಈ ವೇಳೆ ಪಾದಯಾತ್ರೆ ಸೂಕ್ತವಲ್ಲ ಎಂದು ನಮ್ಮ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರು ತೀರ್ಮಾನಿಸಿದ್ದಾರೆ ಎನ್ನುವ ಮೂಲಕ ಬಿಜೆಪಿಯ ಪಾದಯಾತ್ರೆಗೆ ಕೈ ಜೋಡಿಸಿಲ್ಲ ಎಂದಿದ್ದಾರೆ.
ಬಿಜೆಪಿಗೆ ಒಂದು ಕಡೆ ಸ್ವಪಕ್ಷೀಯರಾದ ರಮೇಶ ಜಾರಕಿಹೊಳಿಯಿಂದಲೂ ವಿರೋಧ. ದೋಸ್ತಿ ಪಕ್ಷವಾದ ಜೆಡಿಎಸ್ ನಿಂದಲೂ ವಿರೋಧ. ಇದೆಲ್ಲದರ ನಡುವೆ ಪಾದಯಾತ್ರೆಗೆ ಹೊರಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಆಗುತ್ತೆ? ಯಾರಿಗೆ ಲಾಭ, ಯಾರಿಗೆ ನಷ್ಟ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.