ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಿರಂತರ ಓದಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವ ಮೂಲಕ ಗುರಿ ಸಾಧನೆಯಡೆಗೆ ಸಾಗುವುದರೊಂದಿಗೆ ಸತತ ಅಧ್ಯಯನ ಪರಿಶ್ರಮದ ಮೂಲಕ ಗುರಿ ತಲುಪಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಹೇಳಿದರು. ಭಾನುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ವಿಷಯದ ಕುರಿತಾದ ನಡೆದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಓದು ಅಗತ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್‌ನಂತಹ ಪರೀಕ್ಷೆಗಳ ಪಠ್ಯ ಸಂಗ್ರಹಿಸಿಕೊಂಡು ಹಾಗೂ ಸರಿಯಾಗಿ ಗ್ರಹಿಸಿಕೊಂಡು ಅಭ್ಯಸಿಸಬೇಕು. ಯಾವುದೇ ಕಾರಣಕ್ಕೂ ಪರೀಕ್ಷೆಗಳಿಗೆ ಭಯ ಪಡದೆ, ಓದಿರುವ ವಿಷಯವನ್ನು ಅರ್ಥೈಸಿಕೊಂಡು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಪುನಃ ಅದೇ ವಿಷಯದ ಅಧ್ಯಯನ ಮಾಡಿದಾಗ ಈ ಹಿಂದೆ ಓದಿದ ವಿಷಯ ಬಗ್ಗೆ ಮನನವಾಗಲಿದೆ. ಓದಿದ ವಿಷಯವನ್ನು ವಿನಿಮಯ ಮಾಡಿಕೊಂಡಾಗ ವಿಷಯದ ಕುರಿತು ಜ್ಞಾನದ ಹರವು ವಿಸ್ತಾರಗೊಳ್ಳಲಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಈ ರೀತಿಯ ಕಾರ್ಯಾಗಾರಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿ ಸಹಾಯಕವಾಗಿವೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾಲೇಜು,ವಿವಿಧ ವಸತಿ ನಿಲಯಗಳಲ್ಲಿನ ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಮಾಡುವ ಛಲದೊಂದಿಗೆ ಅಧ್ಯನಶೀಲತೆ ರೂಢಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿನಿತ್ಯ ಅಧ್ಯಯನಕೈಗೊಳ್ಳಬೇಕು. ಆಯ್ಕೆಯ ವಿಷಯ ಕರಗತಗೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಬಹುದಾಗಿದೆ. ಸಾಧಕರ ಪ್ರೇರಣೆಯಾಗಿಟ್ಟುಕೊಂಡು ನಿರಂತರ ಅಧ್ಯಯನ ಮಾಡಬೇಕು. ವಿಷಯಗಳ ಸಮಗ್ರವಾಗಿ ಅರಿತುಕೊಂಡು ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೆಎಎಸ್, ಐಎಎಸ್ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಎಸ್ ಡಿ ವಿಜಡಂನ ಸಂಸ್ಥಾಪಕ ಅಧ್ಯಕ್ಷರಾದ ಶರಣಯ್ಯ ಭಂಡಾರಿಮಠ ಅವರು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತಾಗಿ ಸಮಗ್ರ ವಿಷಯ ತಿಳಿಸಿಕೊಟ್ಟರು.
ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ ಪೋತದಾರ ಸ್ವಾಗತಿಸಿದರು, ಉಮೇಶ್ ಲಮಾಣಿ, ಮಂಜು ಹಿರೇಮನಿ, ಅರವಿಂದ್ ಲಂಬು, ಸದಾನಂದ ಬಡಿಗೇರ , ಮಾದೇಶ್ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.