ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಮಂಡ್ಯದಲ್ಲಿ ನಡೆಯುತ್ತಿದೆ. ಡಿಸೆಂಬರ್ 20 ರಿಂದ 22ರ ತನಕ ಮೂರು ದಿನಗಳ ಕಾಲ ಸಮ್ಮೇಳನ ನಡೆಯುತ್ತಿದೆ. ಇದಕ್ಕೆ ಭರದ ಸಿದ್ಧತೆ ನಡೆದಿದೆ. ಇದರ ನಡುವೆ ಇದೀಗ ಊಟದ ವಿಚಾರಕ್ಕೆ ಪರ ವಿರೋಧಗಳು ಕೇಳಿ ಬರುತ್ತಿವೆ. ಸಾಹಿತ್ಯ ಸಮ್ಮೇಳನದಲ್ಲಿ ಮದ್ಯ, ಮಾಂಸ, ತಂಬಾಕು ಮರಾಟ ನಿಷೇಧಿಸಲಾಗಿದೆ ಎನ್ನುವ ನಿಯಮ ವಿಧಿಸಲಾಗಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಸಮ್ಮೇಳನ ಸಸ್ಯಹಾರಿಗಳಿಗೆ ಮಾತ್ರವೇ? ಇದು ಮಡಿ ಸಾಹಿತ್ಯ ಸಮ್ಮೇಳನ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಶುರುವಾಗುವ ಪರ, ವಿರೋಧದ ಚರ್ಚೆಗಳಲ್ಲಿ ಇತ್ತೀಚೆಗೆ ಊಟದ ವಿಚಾರ ದೊಡ್ಡದಾಗುತ್ತಿದೆ. ಇದಕ್ಕಾಗಿಯೇ ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ. ಸಮ್ಮೇಳನ ನಡೆಯುವ ಪ್ರದೇಶದ ವಿಶೇಷ ಊಟ, ಉಪಚಾರ ಮಾಡುವುದು ಸಾಮಾನ್ಯ. ಇದರ ಜೊತೆಗೆ ಮಳಿಗೆಗಳನ್ನು ಬಾಡಿಗೆ ನೀಡಲಾಗಿರುತ್ತೆ. ಅಲ್ಲಿ ವಿವಿಧ ರೀತಿ ವಸ್ತುಗಳ ಜೊತೆಗೆ ತಿಂಡಿ, ತಿನಿಸು, ಊಟ ಸಹ ಸಿಗುತ್ತೆ. ಈಗ ಮಾಂಸಾಹಾರ ನಿಷೇಧ ವಿಚಾರಕ್ಕೆ ವಿರೋಧ ನೋಡಿದರೆ ಅದ್ಯಾಕೋ ಸಮಂಜಸ ಎನಿಸುತ್ತಿಲ್ಲ. ಸಾಹಿತ್ಯ ವಿಚಾರಕ್ಕೆ ಸಂಬಂಧಿಸಿದಂತೆ ಏನೇ ವಿರೋಧಗಳಿದ್ದರೆ ಚರ್ಚಿಸಬಹುದು. ಸಾಹಿತ್ಯೇತರರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ಬಂದಾಗ ವ್ಯಕ್ತವಾದ ವಿರೋಧ ಸರಿಯಾಗಿದೆ. ಕವಿಗೋಷ್ಠಿ, ಸಂವಾದ ಸೇರಿ ಇತರೆ ವಿಚಾರಗಳಿಗೆ ತಕರಾರು ಇದ್ದರೆ, ಭಿನ್ನಾಭಿಪ್ರಾಯವಿದ್ದರೆ ಹೇಳಬಹುದು. ಅದೆಲ್ಲ ಬಿಟ್ಟು ಬಾಡೂಟಕ್ಕೆ ಅವಕಾಶವಿಲ್ಲವೆಂದು ಜಗಳ ಮಾಡುತ್ತಾ ಹೋಗುವುದು ಎಷ್ಟು ಸರಿ?
ಸಮ್ಮೇಳನದ ಸಂದರ್ಭದಲ್ಲಿ ಮಾಂಸಹಾರ ತಿನ್ನಲೇಬೇಕು ಎನ್ನುವವರಿಗೆ ನಗರದಲ್ಲಿ ಹಲವು ಕಡೆ ಅಂಗಡಿಗಳು ಸಿಗುತ್ತೆ. ಸಮ್ಮೇಳನದಿಂದ ಒಂದಿಷ್ಟು ದೂರ ಹೋಗಿ ತಿಂದು ಬರಬಹುದು. ರಾತ್ರಿ ಊಟಕ್ಕೆ ಹೊರಗೆ ಹೋದಾಗ ಬೇಕಿದ್ದರೂ ಮಾಂಸಹಾರ ತಿನ್ನಬಹುದು. ಪರ ಊರಿನಿಂದ ಬಂದವರಿಗೂ ಒಂದಿಷ್ಟು ಊರಿನ ಪರಿಚಯವಾಗಬುದು. ಸಮ್ಮೇಳನದ ಮಳಿಗೆಗಳಲ್ಲಿ ನಿಷೇಧ ಹೇರಿದ್ದಾರೆ ಎನ್ನುವ ವಿಚಾರ ಮುಂದಿಟ್ಟುಕೊಂಡು ಆಹಾರ ನಮ್ಮ ಆಯ್ಕೆ, ನಮ್ಮ ಸಂಸ್ಕೃತಿ ಎನ್ನುವ ವಾದಕ್ಕಿಂತ ಕೆಲವೊಂದು ಸಾರಿ ಪ್ರಮುಖ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕೇ ಹೊರತು ಸಣ್ಣಪುಟ್ಟ ವಿಚಾರಗಳಿಗಲ್ಲ. ಪರ್ಯಾಯ ಆಯ್ಕೆ ಇರುವಾಗ ತಾತ್ಕಾಲಿಕ ವಿಚಾರಗಳಿಗೆ ಹೆಚ್ಚು ಗಮನ ಕೊಡದೆ ಲಕ್ಷಾಂತರ ಜನರು ಸೇರುವ ಸಮ್ಮೇಳನದಲ್ಲಿ ಕೆಲವೊಂದಿಷ್ಟನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಯಾಕಂದ್ರೆ ಇಂತಹ ವಿಚಾರಗಳಲ್ಲಿ ಮಹತ್ವದ ವಿಷಯ ಕಳೆದು ಹೋಗಬಾರದು. ಹೀಗಾಗಿ ಪ್ರತಿಯೊಂದಕ್ಕೂ ಪ್ರತಿರೋಧ ತೋರಿಸುವುದು ಎಷ್ಟು ಸರಿ ಅಂತ ನಮ್ಮನ್ನ ನಾವೇ ಪ್ರಶ್ನಿಸಿಕೊಳ್ಳಬೇಕಿದೆ.