ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ(Devara Hipparagi): ಮನೆ ಮನೆಗೆ ಜನಸ್ನೇಹಿ ಪೊಲೀಸ್ ಯೋಜನೆಯ ಭಾಗವಾಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಿಂದ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ದೇವರ ಹಿಪ್ಪರಗಿ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆಗಳಿಗೆ ಭಯಪಡುವ ಅಗತ್ಯವಿಲ್ಲ. ನಿಮ್ಮ ಅಗತ್ಯ ನೆರವಿಗೆ ಪೊಲೀಸರು ಸದಾ ಸಿದ್ದರಿದ್ದೇವೆ ಎಂದು ಪಿಎಸ್‍ಐ ಸಚೀನ್ ಆಲಮೇಲಕರ್ ಹೇಳಿದರು.
ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ತರ ಉದ್ದೇಶದಿಂದ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ. ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹ ಪರ ಸಂಬಂಧ ಬೆಸೆದುಕೊಳ್ಳಲು ಅನುಕೂಲ ಆಗಲಿದೆ. ಸಾರ್ವಜನಿಕರು ಇಲಾಖೆಗೆ ಸಹಕರಿಸಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




