ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ನಗರದಲ್ಲಿರುವ ಕನ್ನಡಿಗರ ಅಭಿಮಾನ ತುಂಬಾ ಕಂಡಿರುವೆ. ನಾವು ನಮ್ಮ ಊರಲೆ ಇರುವ ಹಾಗೇ ಭಾಸವಾಗುತ್ತಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಬೆಳೆಸುವ ಉಳಿಸುವ ನಿಟ್ಟಿನಲ್ಲಿ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರು ಕುಟುಂಬದಲ್ಲಿ ಕನ್ನಡ ಭಾಷೆಯನ್ನು ಮಾತಾಡುವ ಮೂಲಕ ಉಳಿಸಲು ಸಾಧ್ಯವಾಗುತ್ತದೆ ಎಂದು ನಗರದ ಟ್ರಾಫಿಕ್ ಡಿಸಿಪಿ ಕನ್ನಡಿಗರಾದ ರಾಹುಲ್ ಹೆಗಡೆ ಹೇಳಿದರು.
ಬುಧವಾರ ಸಂಜೆ ನಗರದ ರವಿಂದ್ರ ಭಾರತೀಯಲ್ಲಿ ಕರ್ನಾಟಕದ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘ ಹೈದರಾಬಾದ್ ಮತ್ತು ಕನ್ನಡ ಸಾಹಿತ್ಯ ಪರಿಷತ ತೆಲಂಗಾಣ ಘಟಕವು ಜಂತಿಯಾಗಿ ಆಯೋಜಿಸಿದ ಹೊರನಾಡು ಕನ್ನಡಿಗರ ಸಮಸ್ಯೆ ಮತ್ತು ಸಾಹಿತ್ಯ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹೊರನಾಡ ಕನ್ನಡಿಗರ ಸ್ಥಿತಿಗತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ತಿಳಿದುಕೊಳ್ಳುವಾಗ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತ ಅವುಗಳಿಗೆ ಉತ್ತರ ರೂಪದಲ್ಲಿ ಹೊರನಾಡ ಕನ್ನಡಿಗರ ಸ್ಥಿತಿಗತಿ ಏನು ಅನ್ನುವುದನ್ನು ರೂಪಿಸಬಹುದೆಂದು ಉಸ್ಮಾನೀಯ ವಿಶ್ವವಿದ್ಯಾಲಯದ ಡೀನ್ ಹಾಗೂ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಲಿಂಗಪ್ಪ ಗೋನಾಲ ಹೇಳಿದರು. ಹೊರನಾಡ ಕನ್ನಡಿಗರಂದರೆ ಯಾರು?, ಗಡಿನಾಡ ಕನ್ನಡಿಗರಿಗೂ-ಹೊರನಾಡ ಕನ್ನಡಿಗರಿಗೂ ಇರುವ ಸಾಮ್ಯ-ವೈಷಮ್ಯಗಳಾವುವು?, ಹೊರನಾಡ ಕನ್ನಡಿಗರ ಸಮಸ್ಯೆಗಳಾವುವು?, ಗಡಿನಾಡ ಕನ್ನಡಿಗರ ಸಮಸ್ಯೆಗಳಾವುವು?, ಈ ಸಮಸ್ಯೆಗಳಿಗೆ ಪರಿಹಾರಗಳಿವೆಯೇ?, ಹಾಗಾದರೆ ಪರಿಹಾರಗಳಾವುವು?, ಸರ್ಕಾರ, ಸಂಸ್ಥೆಗಳು ಮಾಡಬೇಕಾದುದು ಏನು?, ಹೊರನಾಡ/ಗಡಿನಾಡ ಕನ್ನಡಿಗರು ಮಾಡಬೇಕಾದದ್ದು ಏನು?, ಇವರ ಸಮಸ್ಯೆಗಳಿಗೆ ಮೂಲ ಕಾರಣಗಳೇನು?, ಹೊರನಾಡ ಕನ್ನಡಿಗರಿಗೆ ನಿಜವಾಲೂ ಸಮಸ್ಯೆಗಳಿವೇಯೇ? ಅನ್ನೋ ವಿಚಾರಗಳ ಬಗ್ಗೆ ಗಮನಸೆಳೆದರು.
ವಿಚಾರ ಸಂಕಿರಣದಲ್ಲಿ ಕನ್ನಡ ಸಾಂಸ್ಕೃತಿಕ ಸಮಾರಂಭ ನಡೆಸಲು ಕನ್ನಡ ಭವನ ನಿರ್ಮಾಣವಾಗಬೇಕು, ಹೊರನಾಡು ಕನ್ನಡಿಗರ ಸಂಘಟನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಮಂಜೂರಿ ಮಾಡಬೇಕು ಎಂಬ ಏಕಾಭಿಪ್ರಾಯ ವ್ಯಕ್ತವಾಯಿತು. ಅನೀಲಕುಮಾರ ಪಾಟೀಲ, ವಿಠಲ ಜೋಶಿ, ಧರ್ಮೇಂದ್ರ ಪೂಜಾರಿ ಬಗ್ದೂರಿ, ನಾಗರಾಜ ಸೋರಾಳೆ ಮಾತನಾಡಿದರು. ಸುಮತಿ ನಿರಂಜನ, ದಿಡಗಿ ರಾಘವೇಂದ್ರರಾವ, ನಾಗನಾಥ ಪಾಟೀಲ, ಶಿವಪ್ರಸಾದ ಸಜ್ಜನರ್, ಬಸವರಾಜ ಲಾರಾ, ರಾಜಕುಮಾರ ಮನ್ನಳಿ, ರವಿ ಪಾಟೀಲ, ಭಗವಾನ ಜವಳೆ, ಮಾಣಿಕರೆಡ್ಡಿ, ಲೋಕೇಶ ಸಾಗವೇ, ಸಂಗಮೇಶ, ಬಾಬುರಾವ ಪುಣ್ಣಶೆಟ್ಟಿ, ಅಮರನಾಥ, ಶಿವಾಜಿ ಹೀಗೆ ಅನೇಕ ಕನ್ನಡಿಗರು ಭಾಗವಹಿಸಿದರು. ರಮೇಶ ಬಾಬು ನಿರೂಪಿಸಿದರು.




