ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರ ಅಣ್ಣ ರವಿಗೌಡ ಸಿದ್ದಪ್ಪ ಬಿರಾದಾರ ಇವರ 2ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ, ಪುರಸಭೆಗೆ ಮುಕ್ತಿ ವಾಹನವನ್ನು ನೀಡಲಾಯಿತು. ಪಟ್ಟಣದಲ್ಲಿನ ಬಡವರಿಗೆ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅನುಕೂಲವಾಗಲಿ ಎಂದು ಅಣ್ಣನ ಹೆಸರಿನಲ್ಲಿ ಪುರಸಭೆಗೆ ಕೊಡುಗೆಯಾಗಿ ನೀಡಿದರು. ಆಶೀರ್ವಾದ ಗ್ರೂಪ್ಸ್ ವತಿಯಿಂದ ಶನಿವಾರ ಪಟ್ಟಣದಲ್ಲಿನ ಅವರ ನಿವಾಸದ ಹತ್ತಿರ ನಡೆದ ಕಾರ್ಯಕ್ರಮದಲ್ಲಿ ದಿ.ರವಿಗೌಡ ಬಿರಾದಾರ ಅವರ ಪತ್ನಿ ಲಕ್ಷಿ ಬಿರಾದಾರ ಅವರು ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಕೀ ಹಸ್ತಾಂತರಿಸಿದರು.
ಈ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಪರೋಪಕಾರ ಮಾಡುವುದು ಪುಣ್ಯದ ಕೆಲಸ. ಹುಟ್ಟಿದ ಮೇಲೆ ಮನುಷ್ಯ ಸಮಾಜದಲ್ಲಿ ಏನಾದರೂ ಒಂದು ಗುರುತು ಬಿಟ್ಟು ಹೋಗಬೇಕು. ಸಿದ್ದಪ್ಪ ಮಾಸ್ತರರ ಕುಟುಂಬಸ್ಥರು ತಮ್ಮ ಮಗನ ನೆನಪಿನಲ್ಲಿ ಮುಕ್ತಿ ವಾಹನ ನೀಡಿದ್ದು ಒಳ್ಳೆಯ ಕೆಲಸ. ಇದರಿಂದ ಎಲ್ಲ ಸಮಾಜದ, ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸಿದ್ದಪ್ಪ ಮಾಸ್ತರ ಬಿರಾದಾರ, ವಿಜಯಲಕ್ಷ್ಮಿ ಸಿದ್ದಪ್ಪ ಬಿರಾದಾರ, ನಾಗರತ್ನ ಅಶೋಕ ಮನಗೂಳಿ ಸೇರಿದಂತೆ ಬಿರಾದಾರ, ಮನಗೂಳಿ ಕುಟುಂಬಸ್ಥರು, ಪುರಸಭೆ ಸದಸ್ಯರು, ಸಿಬ್ಬಂದಿ ಹಾಗೂ ಹಲವು ಮುಖಂಡರು ಭಾಗವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ನಿರೂಪಿಸಿ ವಂದಿಸಿದರು.