ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ ಮಧುರಚೆನ್ನರ 122ನೇ ಜನ್ಮ ದಿನಾಚರಣೆಯನ್ನು ಜುಲೈ 31ರ ಗುರುವಾರ ಹಲಸಂಗಿ ಗ್ರಾಮದ ಶ್ರೀ ಅರವಿಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಲಸಂಗಿಯ ಎಸ್.ಎ.ವಿ.ವಿ. ಸಂಘದ ಅಧ್ಯಕ್ಷರಾದ ಅರವಿಂದ ಮನಮಿ ಉದ್ಘಾಟಿಸಿದರು. ಇಂಡಿ ವಿಭಾಗದ ಉಪ ವಿಭಾಗಾಧಿಕಾರಿಗಳಾದ ಅನುರಾಧಾ ವಸ್ತ್ರದ ಮಾತನಾಡಿ, ಸಂವಿಧಾನ ನಮಗೆಲ್ಲ ಸಮನಾದ ಅವಕಾಶ ಕೊಟ್ಟಿದೆ ವಿದ್ಯಾರ್ಥಿಗಳು ಪಠ್ಯದೊಂದಿಗೆ ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳಿಸಿಕೊಳ್ಳಿ. ಕನ್ನಡ ಸಾಹಿತ್ಯದಲ್ಲಿ ಅದ್ಭುತ ಜನಪದ ಕಾವ್ಯಗಳಿವೆ. ಜನಪದ ಸಾಹಿತ್ಯವು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಇರುವುದರಿಂದ ಜನಪ್ರಿಯವಾಗಿವೆ ಎಂದು ಹೇಳಿದರು.
ಡಾ.ಸಂಗಮೇಶ ಮೇತ್ರಿ ಮಾತನಾಡಿ, ಮಧುರಚೆನ್ನರು ಒಬ್ಬರು ಅನುಭವಿ ಕವಿ. ಸ್ವತಂತ್ರ‍್ಯ ಪೂರ್ವ ಹಲಸಂಗಿ ಗೆಳೆಯರ ಬಳಗ ಸಾಮಾಜಿಕ ರಾಷ್ಟ್ರದ ಚಿಂತನೆಯನ್ನು ಮಾಡುವ ಗುಂಪು. ಹಲಸಂಗಿಯು ಕರ್ನಾಟಕ ಜಾನಪದ ಸಾಹಿತ್ಯದ ಹೆಬ್ಬಾಗಿಲು, ಸ್ವಾತಂತ್ರ‍್ಯ ತಂದು ಕೊಟ್ಟ ಈ ಊರು ಆದ್ಯಾತ್ಮದ ಶಿಖರವನೇರಿ ಹಲಸಂಗಿಯನ್ನು ನಾಡಿಗೆ ಪರಿಚಯಿಸಿರುವ ಈ ಹಲಸಂಗಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ಮಧುರ ಚೆನ್ನರು ಓದಿದ್ದು 7ನೇ ತರಗತಿ ಆದರೂ ಸಹ 21 ಭಾಷೆಯನ್ನು ಕಲಿತಿದ್ದರು. ಹಲಸಂಗಿ ಗೆಳೆಯರ ನನ್ನನಲ್ಲನಂತಹ ಪುಸ್ತಕ ಹಾಗೂ ಗರತಿ ಹಾಡಿಗೆ ಸರಿಸಾಟಿ ಸಾಹಿತ್ಯ ಜಾನಪದ ಕವನ ಸಂಕಲನ ಬಂದಿಲ್ಲ ಎಂದು ಮಧುರಚೆನ್ನರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಲಸಂಗಿ ಪ್ರತಿಷ್ಠಾನದ ಸದಸ್ಯರಾದ ಬಿ.ಆರ್. ಬನಸೊಡೆ ಅವರು, ಮಧುರಚೆನ್ನರ ಮಣ್ಣಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು. ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಮಧುರಚೆನ್ನರ ಸಾಹಿತ್ಯವನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ, ಜನಪದ ಸಾಹಿತಿ ಸಿಂಪಿಲಿಂಗಣ್ಣನವರ ನನ್ನನಲ್ಲ ಪುಸ್ತಕವು ಪ್ರಪಂಚದ ಪ್ರತಿ ವಸ್ತುವಿನಲ್ಲಿ ದೇವರನ್ನು ಕಾಣುವ ಮಹಾ ಸಾಹಿತ್ಯವಾಗಿದೆ ಎಂದು ಹೇಳಿದರು.
ಅರವಿಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಬಿ. ತಿಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಧುರಚೆನ್ನರ ಮತ್ತು ಪಿ.ಧೂಲಾಸಾಹೇಬ ಅವರ ವಂಶಸ್ಥರು ಭಾಗವಹಿಸಿದರು. ಮುಖ್ಯೋಪಾಧ್ಯಾಯ ಬಿ.ಬಿ.ಹೊನಮಾನೆ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ, ಡಾ.ವಿ.ಡಿ.ಐಹೊಳ್ಳಿ, ದಾಕ್ಷಾಯಣಿ ರಮೇಶ ಬಿರಾದಾರ, ಡಾ.ರಮೇಶ ಸಿದ್ದಣ್ಣ ಕತ್ತಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಸಂತೋಷ ಭೋವಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎ.ಡಿ.ದ್ರಾಕ್ಷಿ, ಶ್ರೀದೇವಿ ಸಿ. ಹಲಸಂಗಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಮಂಜುಳಾ ಹಿಪ್ಪರಗಿ ಕಾರ್ಯಕ್ರಮದಲ್ಲಿ ಜನಪದ ಗೀತೆ ಗಾಯನ ಮಾಡಿದರು. ಚಂದ್ರಶೇಖರ ಅ.ಬಗಲಿ ಕಾರ್ಯಕ್ರಮ ನಿರೂಪಿಸಿದರು.