Ad imageAd image

ಕುಡಿಯುವ ನೀರಿನ ಸಮಸ್ಯೆ, ಅಧಿಕಾರಿಗಳಿಗೆ ಶಾಸಕ ಮನಗೂಳಿ ಎಚ್ಚರಿಕೆ

Nagesh Talawar
ಕುಡಿಯುವ ನೀರಿನ ಸಮಸ್ಯೆ, ಅಧಿಕಾರಿಗಳಿಗೆ ಶಾಸಕ ಮನಗೂಳಿ ಎಚ್ಚರಿಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಬೇಸಿಗೆ ಶುರುವಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನ ಇನ್ನು ಹೆಚ್ಚಾಗಲಿದ್ದು, ತಾಲೂಕಿನ ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆಯೋ ಅದನ್ನು ಕೂಡಲೇ ಬಗೆಹರಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸಿಂದಗಿ, ಆಲಮೇಲ ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಡಿಒಗಳು, ಅಧಿಕಾರಿಗಳು ಕಾಟಾಚಾರಕ್ಕೆ ಮಾಹಿತಿ ಕೊಟ್ಟು ಹೋಗುವುದಲ್ಲ. ಸ್ಥಾನಿಕವಾಗಿ ಇರುವ ಪಿಡಿಒಗಳು ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ನೀರಿನ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಬೇಕು ಎಂದರು.

ಜೆಜೆಎಂ ಕಾಮಗಾರಿ ಯಾವ ಪ್ರಗತಿಯಲ್ಲಿದೆ. ಇನ್ನು ಎಷ್ಟು ಕೆಲಸ ಬಾಕಿ ಉಳಿದಿದೆ. ಕೊಳವೆಬಾಯಿ, ನೀರಿನ ಟ್ಯಾಂಕ್ ಗಳ ಪರಿಸ್ಥಿತಿ ಸೇರಿದಂತೆ ಪ್ರತಿಯೊಂದರ ಕುರಿತು ಗಂಭೀರವಾಗಿ ಕೆಲಸ ಮಾಡಬೇಕು. ಗುಂದಗಿಯಲ್ಲಿ ನೀರಿನ ಸಂಪರ್ಕ ಮಾಡುವ ಪೈಪ್ ಅಳವಡಿಕೆ ಕುರಿತು ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ತಾರಾನಾಥ ಅವರನ್ನು ಕೇಳಿದಾಗ ಜನವರಿ 25, 2022ರಲ್ಲಿ ಟೆಂಡರ್ ಕರೆಯಲಾಗಿದೆ ಎಂದರು. ಆದರೂ ಇದುವರೆಗೂ ಆ ಕೆಲಸವೇ ಆಗಿಲ್ಲ ಎಂದಾಗಿ ಕೆಇಬಿ ಕಡೆ ಬೊಟ್ಟು ಮಾಡಿದರು. ಬರೋಬ್ಬರಿ 3 ವರ್ಷ ಕಳೆದರೂ ಪೈಪ್ ಅಳವಡಿಸುವ ಕೆಲಸವಾಗದೆ ಇರುವುದಕ್ಕೆ ಗರಂ ಆಗಿ ಒಂದು ವಾರದೊಳಗೆ ಕೆಲಸವಾಗಬೇಕು ಎಂದು ಸೂಚಿಸಿದರು.

ಬಿಸನಾಳ, ಹಂದಗಿನಗೂರ ಎಲ್.ಟಿ, ಗೋಲಗೇರಿ, ಸಾಸಾಬಾಳ, ಡವಳರ, ಬ್ಯಾಕೋಡ್, ಯಕಂಚಿ, ಬಂದಾಳ ಅಲಹಳ್ಳಿ ಪಂಚಾಯ್ತಿಗಳು ಸೇರಿ ಸಿಂದಗಿ, ಆಲಮೇಲ ತಾಲೂಕಿನ ಪಂಚಾಯ್ತಿಗಳ ಪಿಡಿಒಗಳು ನೀರಿನ ಸಮಸ್ಯೆ ಕುರಿತು ಹೇಳಿದರು. ನೀರು ಸರಬಾರಜು ಇಲಾಖೆ ಹಾಗೂ ಪಿಡಿಒಗಳ ನಡುವೆ ಹೊಂದಾಣಿಕೆ ಇಲ್ಲದೆ ಇರುವುದು ಸಭೆಯಲ್ಲಿ ಅವರ ಮೇಲೆ ಇವರು ಇವರ ಮೇಲೆ ಅವರು ಹಾಕುವುದರಲ್ಲಿ ಕಂಡು ಬಂದಿತು. ಬಹುಹಳ್ಳಿ ಕುಡಿಯುವ ನೀರು ಯೋಜನೆಗೆ ಒಳಪಡುವ ಹಳ್ಳಿಗಳಿಗೆ ಸರಿಯಾಗಿ ನೀರು ಪೂರೈಕೆಯಾಗಬೇಕು. ಜೂನ್ ಮಧ್ಯದ ತನಕ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜೆಜೆಎಂ ಕಾಮಗಾರಿ ಕಳಪೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳ 14 ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ಶಾಸಕರು ವಿತರಣೆ ಮಾಡಿದರು. 2024-25ನೇ ಸಾಲಿನ ತಾಲೂಕು ಪಂಚಾಯ್ತಿ ಅನಿರ್ಬಂಧಿತ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು. ಮುಂದಿನ ವಾರದಲ್ಲಿ ಆಲಮೇಲ ತಾಲೂಕಿನಲ್ಲಿ ವಾಹನ ವಿತರಣೆ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಸಭೆಯಲ್ಲಿ ಸಿಂದಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಆಲಮೇಲ ತಹಶೀಲ್ದಾರ್ ಕೆ.ವಿಜಯಕುಮಾರ್, ಸಿಂದಗಿ ತಾಲೂಕು ಪಂಚಾಯ್ತಿ ಇಒ ರಾಮು ಅಗ್ನಿ, ಆಲಮೇಲ ಪಟ್ಟಣ ಪಂಚಾಯ್ತಿ ಇಒ ಫರಿದಾ ಪಠಾಣ ಉಪಸ್ಥಿತರಿದ್ದರು. ಎರಡು ತಾಲೂಕುಗಳ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article