ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ ಮೊತ್ತದ ಡ್ರಗ್ಸ್ ಅನ್ನು ಮಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ವಿದೇಶಿ ಯುವತಿಯರನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ಸಿಸಿಬಿ ಪೊಲೀಸರು ಬರೋಬ್ಬರಿ 75 ಕೋಟಿ ರೂಪಾಯಿ ಮೌಲ್ಯದ 37.878 ಕೆಜಿಯ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಬಾಂಬಾ ಫಾಂಟಾ(31), ಒಲಿಜೊ ಇಯಾನ್ಸ್(30) ಅನ್ನೋ ಇಬ್ಬರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಇವರನ್ನು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದಲ್ಲಿ ಮಾರ್ಚ್ 14ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿಕೊಂಡಿದ್ದ ಹೈದರ್ ಆಲಿ ಎಂಬಾತನನ್ನು 2024ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನ ಮಾಹಿತಿ ಮೇಲೆ ಡ್ರಗ್ಸ್ ಪೆಡ್ಲರ್ ಆಗಿದ್ದ ನೈಜಿರಿಯಾ ಮೂಲದ ಪೀಟರ್ ಐಕೆಡಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇವನ ವಿಚಾರಣೆ ನಡೆಸಿ, ಇದರ ಜಾಡು ಹಿಡಿದು ಹೋದಾಗ ಭಾರಿ ಪ್ರಮಾಣದಲ್ಲಿ ಮಾದಕ ವಸ್ತು ಪೂರೈಕೆಯಾಗುತ್ತಿರುವುದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು ಬೆಂಗಳೂರಿಗೆ ಬಂದು ಬಾಡಿಗೆ ಟ್ಯಾಕ್ಸಿಯಲ್ಲಿ ತಿರುಗಾಡಿ ಡ್ರಗ್ ಪೆಡ್ಲರ್ ಗಳಿಗೆ ಪೂರೈಕೆ ಮಾಡುತ್ತಿದ್ದರು. ದೆಹಲಿಯಿಂದ ಬೆಂಗಳೂರಿಗೆ ಬರುವಾಗ ಎರಡು ಟ್ರಾಲಿ ಬ್ಯಾಗ್ ಗಳಲ್ಲಿ ತಂದಿದ್ದ 37.878 ಕೆಜಿ ಎಂಡಿಎಂಎ, 4 ಮೊಬೈಲ್ ಗಲು, ಎರಡು ಪಾಸ್ ಪೋರ್ಟ್, 18,460 ರೂಪಾಯಿ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಯನ್ನು ತಪ್ಪಿಸಿ ಅದ್ಹೇಗೆ ಮಾದಕ ವಸ್ತುಗಳ ಸಾಗಾಟ ನಡೆಸುತ್ತಿದ್ದರು ಅನ್ನೋದು ತಿಳಿದು ಬರಬೇಕಿದೆ.
ಬಾಂಬಾ ಫಾಂಟಾ ಅಲಿಯಾಸ್ ಅಡ್ನೊಯಿಸ್ ಜಾಬುಲಿಲೆ ಬ್ಯುಸಿನೆಸ್ ವಿಸಾದಲ್ಲಿ ಭಾರತಕ್ಕೆ ಬಂದಿದ್ದಾಳೆ. 2020ರಿಂದ ಇಲ್ಲಿ ಫುಡ್ ಕೋರ್ಟ್ ವ್ಯವಹಾರ ಮಾಡುತ್ತಿದ್ದು, ದೆಹಲಿಯ ನಾವ್ಡಾದ ಲಕ್ಷ್ಮಿವಿಹಾರದಲ್ಲಿ ನೆಲೆಸಿದ್ದಳು. ಒಲಿಜೊ ಇಯಾನ್ಸ್ ದೆಹಲಿಯ ಮಾಳವೀಯ ನಗರದಲ್ಲಿ ವಾಸವಾಗಿದ್ದಳು. 2016ರಲ್ಲೇ ಮೆಡಿಕಲ್ ವಿಸಾದ ಮೇಲೆ ಭಾರತಕ್ಕೆ ಬಂದಿದ್ದಾಳೆ. ಇಲ್ಲಿಯ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಇದರ ಜೊತೆಗೆ ಮಾದಕ ವಸ್ತುಗಳ ದಂಧೆ ತೊಡಗಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಇವರನ್ನು ಕೋರ್ಟ್ ಗೆ ಒಪ್ಪಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.