ಪ್ರಜಾಸ್ತ್ರ ಸುದ್ದಿ
ಮುರುಡೇಶ್ವರ(Murudeshwar): ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಇಲ್ಲಿನ ಸಮುದ್ರ ನೋಡಲು ಬಂದಿದ್ದಾರೆ. ನಾಲ್ವರು ಸಮುದ್ರದ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ್ ತಾಲೂಕಿನ ಮುರುಡೇಶ್ವರ ಸಮುದ್ರದ ದಡದಲ್ಲಿ ಮಂಗಳವಾರ ಸಂಜೆ ನಡೆದಿದೆ. ಇದರಲ್ಲಿ ಓರ್ವ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಉಳಿದ ಮೂವರ ಶೋಧಕಾರ್ಯ ನಡೆದಿದೆ. ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗೋಪಾಲಕೃಷ್ಣ ಎಂಬುವರ ಮಗಳು ಶ್ರಾವಂತಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ 9ನೇ ತರಗತಿ ಓದುತ್ತಿದ್ದಳು.
ಎನ್.ಗಡ್ಡೂರು ಗ್ರಾಮದ ಜೈರಾಮಪ್ಪ ಎಂಬುವರ ಪುತ್ರಿ ದೀಕ್ಷಾ, ಹಬ್ಬಣ್ಣಿ ಗ್ರಾಮದ ಚನ್ನರೆಡ್ಡಪ್ಪ ಎಂಬುವರ ಪುತ್ರಿ ಲಾವಣ್ಯ ಹಾಗೂ ದೊಡ್ಡಗಟ್ಟಿಹಳ್ಳಿಯ ಮುನಿರಾಜು ಅವರ ಮಗಳು ವಂದನಾ ಕಾಣೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದಾರೆ. ನಿನ್ನೆ ಸಂಜೆ 7 ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಆಗ ಅಲೆಯ ಹೊಡೆತಕ್ಕೆ ಸಿಲುಕಿದ್ದಾರೆ. ಇದರಲ್ಲಿ ಮೂವರ ರಕ್ಷಣೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಇದೇ ಸಮುದ್ರದಲ್ಲಿ ಪ್ರವಾಸಿಗರು ಸಮುದ್ರದ ಪಾಲಾಗಿದ್ದರು. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ನಿರ್ಬಂಧ ಹೇರಲಾಗಿತ್ತು. ಆದರೆ, ಒಂದು ತಿಂಗಳ ಹಿಂದೆ ತಾಲೂಕು ಆಡಳಿತ ನಿರ್ಬಂಧ ತೆರವುಗೊಳಿಸಿದೆ. ಇದೀಗ ನೋಡಿದರೆ ನಾಲ್ವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸಮುದ್ರದ ಅಲೆಗಳು ಯಾವ ಸಂದರ್ಭದಲ್ಲಿ ಹೇಗೆ ಇರುತ್ತವೆ ಎನ್ನುವುದು ತಿಳಿಯುವುದು ಆಗುವುದಿಲ್ಲ. ಶೈಕ್ಷಣಿಕ ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಸಮುದ್ರ ತೀರದ ಪ್ರದೇಶಗಳನ್ನು ಬಿಟ್ಟು ಐತಿಹಾಸಿಕ ತಾಣಗಳನ್ನು ತೋರಿಸುವುದು ಹಾಗೂ ಅವರ ರಕ್ಷಣೆಯ ಜವಾಬ್ದಾರಿ ಶಾಲೆಯ ಮಂಡಳಿಯವರು ಅತ್ಯಂತ ಎಚ್ಚರಿಕೆಯಿಂದ ನಿಬಾಯಿಸಬೇಕಿದೆ.