Ad imageAd image

ಗ್ಯಾರೆಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ದೂರ ಉಳಿಯಬಾರದು: ಎಂ.ಬಿ ಪಾಟೀಲ

ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿಯಿಂದ ರಾಜ್ಯದ ಎಲ್ಲಾ ವರ್ಗದವರ ಕುಟುಂಬ ನಿರ್ವಹಣೆ,

Nagesh Talawar
ಗ್ಯಾರೆಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ದೂರ ಉಳಿಯಬಾರದು: ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿಯಿಂದ ರಾಜ್ಯದ ಎಲ್ಲಾ ವರ್ಗದವರ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸದಂತಹ ಹಲವು ರೂಪದಲ್ಲಿ ಸಹಕಾರಿಯಾಗಿದೆ. ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ(MB Patil) ಹೇಳಿದರು.

ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲಾ ಪಂಚಾಯತಿಯ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ(Guarantee Schemes) ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಳೆದ ಬಾರಿಯ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ 165 ಭರವಸೆಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ, ಹೊಸದಾಗಿ 30 ಯೋಜನೆಗಳನ್ನು ಸೇರಿಸಿ 188 ಭರವಸೆಗಳನ್ನು ಪೂರೈಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ  ಅವರ ನೇತೃತ್ವದ ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ  ನಡೆಯುತ್ತಿದ್ದೇವೆ. ಗ್ಯಾರಂಟಿ ಅನುಷ್ಠಾನ ಸಮಿತಿಯು ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಸಮರ್ಪಕ ಹಾಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಅರ್ಹರಿಗೆ ಈ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವಲ್ಲಿ ಕಾರ್ಯನಿರತರಾಗಬೇಕು ಎಂದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ. ರೇವಣ್ಣ(H.M Revanna) ಮಾತನಾಡಿ,  ಮಹಿಳಾ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದ್ದು, ಗ್ಯಾರಂಟಿ ಯೋಜನೆಗಳನ್ನು ಕಟ್ಟ ಕಡೆಯ ಜನರಿಗೂ ತಲುಪಿಸುವಲ್ಲಿ ಸಮಿತಿಯ ಪದಾಧಿಕಾರಿಗಳು ಕಾರ್ಯನಿರ್ವಹಿಸಿ ತಮಗೆ ಒದಗಿಸಿರುವ ಜವಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಪಂಚಗ್ಯಾರಂಟಿ ಯೋಜನೆಗಳು ಎಲ್ಲರನ್ನು ಒಳಗೊಂಡ ಸಾಮೂಹಿಕ ಹಾಗೂ ಸರ್ವವ್ಯಾಪಿ ಯೋಜನೆಗಳಾಗಿವೆ ಎಂದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಿಷಿ ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಯೋಜನೆಯ ಫಲಾನುಭವಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ಮೆಹಜನಬಿ ಹೊರ್ತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ್ ಅಹ್ಮದ್ ಬೋರಮಣಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾದ್ಯಕ್ಷರು, ಸಮಿತಿಯ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article