ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದಲ್ಲಿ ಕಳೆದ ಹಲವು ದಿನಗಳಿಂದ ಅತಿಕ್ರಮಣ ತೆರವು ಕೆಲಸ ನಡೆಯುತ್ತಿದೆ. ಇದೇ ರೀತಿ ಶುಕ್ರವಾರ ಮಹಾನಗರ ಪಾಲಿಕೆ ವತಿಯಿಂದ ವಾರ್ಡ್ ನಂಬರ್ 13ರ ಜನತಾ ಬಜಾರ್, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‌ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣವನ್ನು ತೆರವುಗೊಳಿಸಲಾಯಿತು.
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ನಗರದ ನೆಹರು ಮಾರ್ಕೆಟ್ ಹಿಂಭಾಗ, ಎಂಆರ್.ಹೋಟೆಲ್ ಹತ್ತಿರ, ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರ, ಪ್ರವಾಸೋದ್ಯಮ ಮಂದಿರದ ಹಿಂದುಗಡೆ, ಸೈನಿಕ ಶಾಲೆ ರಸ್ತೆಯ ಜಿಮಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರಸ್ತೆಯಲ್ಲಿ ಜಿಲ್ಲಾ ಕ್ರೀಡಾಂಗಣದ ಹತ್ತಿರ ವೆಂಡಿಂಗ್ ಜೋನ್‌ಗಳನ್ನು ಗುರುತಿಸಲಾಗಿದ್ದು, ಸದರಿ ನಿಗದಿತ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ-ವಹಿವಾಟು ನಡೆಸುವಂತೆ ತಿಳಿಸಲಾಗಿದೆ. ಇಂದು ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ವಲಯ ಕಛೇರಿ-1ರ ವಲಯ ಆಯುಕ್ತರಾದ ಸುನೀಲ ಪಾಟೀಲ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು