ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಿಕ್ಷಕ ಹಾಗೂ ಮಕ್ಕಳ ಸಾಹಿತಿಯಾದ ರಾಚು ಕೊಪ್ಪ ಅವರ ಭಾವದ ಬೆನ್ನೇರಿ ಕವನ ಸಂಕಲನಕ್ಕೆ 2024ನೇ ಸಾಲಿನ ಸಮೀರವಾಡಿ ದತ್ತಿ ಪ್ರಶಸ್ತಿ ಲಭಿಸಿದೆ. ಸಮೀರವಾಡಿಯಲ್ಲಿ ನಡೆದ ಅವಿಭಜಿತ ವಿಜಯಪುರ ಜಿಲ್ಲೆಯ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ನೀಡಲಾದ ದತ್ತಿ ಪ್ರಶಸ್ತಿ ನೀಡಲಾಗಿದೆ. ಏಪ್ರಿಲ್ 7ರಂದು ಬೀಳಗಿ ತಾಲೂಕಿನ ಗಲಗಲಿಯಲ್ಲಿ ನಡೆಯುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಲೇಖಕರಿಗೆ ಗೌರವಿಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬೀಳಗಿ ಕಸಾಪ ತಾಲೂಕಾಧ್ಯಕ್ಷ ಗುರುರಾಜ ಲೂತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖಕ ರಾಚು ಕೊಪ್ಪ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಂಥನಾಳದವರು. ಇಂಡಿ, ಅಫಜಲಪುರ, ಬೀಳಗಿ ತಾಲೂಕುಗಳಲ್ಲಿ ದಶಕಗಳ ಕಾಲ ಶಿಕ್ಷಕ ವೃತ್ತಿ ಪೂರೈಸಿದ್ದಾರೆ. ಪ್ರಸ್ತುತ ಸಿಂದಗಿ ತಾಲೂಕಿನ ಬಳಗಾನೂರಿನ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಡತನದ ಪರಿತಾಪ ಅನ್ನೋ ಏಕಾಂಕ ನಾಟಕ, ಹೋಗಣ ನಡಿ ಸಾಲಿಗಿ, ಸೀಸದ ಕಡ್ಡಿ ಅನ್ನೋ ಮಕ್ಕಳ ಕವನ ಸಂಕಲನ, ಎರಡು ಪ್ರೌಢ ಕವನ ಸಂಕಲನ, ಸಂಪಾದನಾ ಕೃತಿ ಸೇರಿದಂತೆ ಹತ್ತಾರ ಪುಸ್ತಕಗಳನ್ನು ಬರೆದಿದ್ದಾರೆ.