ಪ್ರಜಾಸ್ತ್ರ ಸುದ್ದಿ
ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಗೋಡೆ ಕುಸಿದು ಮೃತಪಟ್ಟ ಯಲ್ಲಪ್ಪ ರಾಮಪ್ಪ ಹಿಪ್ಪಿಯವರ ಮನೆಗೆ ಮಾಜಿ ಶಾಸಕ ಅಮೃತ ದೇಸಾಯಿ ಶನಿವಾರ ಭೇಟಿ ನೀಡಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಆರ್ಥಿಕ ಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಅವರು, ರಾಜ್ಯ ಸರ್ಕಾರಕ್ಕೆ ಬಡವರ ಮೇಲೆ ಕಿಂಚಿತ್ ಕಾಳಜಿ ಇಲ್ಲವಾಗಿದೆ. ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಮನೆಗಳು ಬೀಳುತ್ತಿವೆ. ಮನೆ ಕಳೆದುಕೊಂಡ ಜನರು ನಿರ್ಗತಿಕರಾಗುತ್ತಿದ್ದಾರೆ. ಸರ್ಕಾರ ಬಿದ್ದ ಮನೆಗೆ ಅತೀ ಕಡಿಮೆ ಪರಿಹಾರ ಘೋಷಣೆ ಮಾಡಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ ಬಿದ್ದ ಮನೆಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಈಗಿನ ಸರ್ಕಾರ ಅಷ್ಟೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸತತ ಮಳೆಯಿಂದಾಗಿ ಹಳೆಯ ಮನೆಗಳ ಗೋಡೆ ಕುಸಿತವಾಗುತ್ತಿವೆ. ಗ್ರಾಮಸ್ಥರು ಅಪಾಯಕಾರಿ ಹಾಗೂ ವಾಸಿಸಲು ಯೋಗ್ಯವಲ್ಲದ ಮನೆಯಿಂದ ಹೊರಗೆ ಬಂದು ಸುರಕ್ಷಿತ ಸ್ಥಳದಲ್ಲಿ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು. ಮನೆ ಗೋಡೆ ಬಿದ್ದ ಸಂದರ್ಭದಲ್ಲಿ ಗ್ರಾಮಸ್ಥ ಯಲ್ಲಪ್ಪ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟರೆ, ಅವರ ಇಬ್ಬರು ಕುಟುಂಬದ ಸದಸ್ಯರು ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ನಾಗಪ್ಪ ಗಾಣಿಗೇರ, ಯಲ್ಲಪ್ಪ ಡಂಕನವರ, ಗರಗಪ್ಪ ಕೊನ್ನೂರ, ಬಸವರಾಜ ಹವಾಲ್ದಾರ್, ಮಲ್ಲಿಕಾರ್ಜುನ ಗೋಕಾವಿ, ಗುರುಪಾದ ಅಪ್ಪನ್ನವರ ಹಾಗೂ ಗ್ರಾಮ ಪಂಚಾಯತಿ ಪಿಡಿಓ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.