ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೆಪಿಸಿಸಿ ಹಾಗೂ ಸ್ವಾಭಿಮಾನಿಗಳ ಒಕ್ಕೂಟದಿಂದ ಹಾಸನದಲ್ಲಿ ಗುರುವಾರ ಬೃಹತ್ ಜನಕಲ್ಯಾಣ ಸಮಾವೇಶ ನಡೆಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ ನಿಂದ ತಮ್ಮನ್ನು ಉಚ್ಛಾಟಿಸಿದ್ದು ಸೇರಿ ಯಾವೆಲ್ಲ ನಾಯಕರನ್ನು ಬೆಳಸಲಿಲ್ಲ ಎಂದು ಪಟ್ಟಿ ನೀಡಿದರು. ಇದಕ್ಕೆ ಎಕ್ಸ್ ನಲ್ಲಿ ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಅಂದು ಅಹಂನಲ್ಲಿ ನೀವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕೆ ಉಚ್ಛಾಟಿಸಲಾಗಿದೆ ಎಂದಿದ್ದಾರೆ.
ಪಕ್ಷದ ವೇದಿಕೆಯಲ್ಲಿಯೇ ಅಹಿಂದ ಸಮಾವೇಶ ಮಾಡಿದ್ದರೆ ದೇವೇಗೌಡರು ಯಾಕೆ ನಿಮ್ಮನ್ನು ಉಚ್ಛಾಟಿಸುತ್ತಿದ್ದರು. ಪಕ್ಷ ವಿರೋಧಿ ಪಿತೂರಿ ನಡೆಸಿದ್ದಕ್ಕೆ ಉಚ್ಛಾಟಿಸಲಾಯಿತು. ದಲಿತ ಸಮಾಜಕ್ಕೆ ಸೇರಬೇಕಿದ್ದ ಬದಲಿ ನಿವೇಶಗಳನ್ನು ಅಕ್ರಮವಾಗಿ ಪಡೆಯಲು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡಾಗ ಅಹಿಂದ ನೆನಪಾಗಲಿಲ್ಲವೇ? ಮುಡಾ ಹಗರಣ ಬುಡಕ್ಕೆ ಬಂದಿರುವಾಗ ರಕ್ಷಾ ಕವಚವಾಗಿ ಅಹಿಂದ ನೆನಪಾಗುತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.