ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಕಳೆದ 10 ದಿನಗಳಿಗಿಂತಲೂ ಹೆಚ್ಚು ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟಿಗೆ ಪರಿಹಾರ ಸಿಕ್ಕಿದೆ. ಇಲ್ಲಿನ ವಿಧಾನ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ದೇವೇಂದ್ರ ಫಡ್ನವಿಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನೆಂದು ಸೂಚಿಸಲಾಯಿತು. ಅದಕ್ಕೆ ಎಲ್ಲರಿಂದ ಒಪ್ಪಿಗೆ ಸಿಕ್ಕಿದೆ. ಅವಿರೋಧವಾಗಿ ಆಯ್ಕೆ ಆಗಿದ್ದರಿಂದ ಇಂದು ಮಾಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಪಡೆಯಲಿದ್ದಾರೆ.
ಈ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಯವರನ್ನು ವೀಕ್ಷಕರನ್ನಾಗಿ ನೇಮಿಸಿತ್ತು. ಮಹಾಯುತಿ ಸರ್ಕಾರದಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಡಿಸಿಎಂ ಆಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಪ್ರಧಾನಿ ಮೋದಿ ಸೇರಿದಂತೆ ಇತರೆ ನಾಯಕರ ಸಮ್ಮುಖದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ 288 ಸ್ಥಾನಗಳಲ್ಲಿ ಬಿಜೆಪಿ 132 ಸ್ಥಾನಗಳನ್ನು ಪಡೆದಿದೆ. ಮಿತ್ರ ಪಕ್ಷಗಳಾದ ಶಿವಸೇನೆ(ಏಕನಾಥ್ ಶಿಂಧೆ ಬಣ), ಎನ್ ಸಿಪಿ(ಅಜಿತ್ ಪವಾರ್ ಬಣ) ಸೇರಿ ಇತರೆ ಕೆಲ ಪಕ್ಷಗಳು ಸೇರಿ 230 ಸ್ಥಾನಗಳನ್ನು ಪಡೆದಿವೆ. ನವೆಂಬರ್ 23ರಂದು ಫಲಿತಾಂಶ ಬಂದಿದ್ದು, ಸಿಎಂ ಯಾರಾಗಬೇಕು ಹಾಗೂ ಖಾತೆ ಹಂಚಿಕೆ ವಿಚಾರಕ್ಕಾಗಿ ಇಷ್ಟು ದಿನಗಳನ್ನು ತೆಗೆದುಕೊಂಡಿದೆ. ಯಾರೆಲ್ಲ ಸಚಿವರಾಗುತ್ತಾರೆ. ಮಿತ್ರ ಪಕ್ಷಗಳಿಗೆ ಎಷ್ಟು ಸಚಿವ ಸ್ಥಾನ ಸಿಗುತ್ತೆ ಅನ್ನೋದು ಮುಂದೆ ತಿಳಿಯಲಿದೆ.